ಇ.ಡಿ ಅಧಿಕಾರಿಗಳು ಯಾಕೆ ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್ ಬೇಸರ

ಬೆಂಗಳೂರು, ನವೆಂಬರ್ 5: ಇ.ಡಿ ಯವರು ಪದೇ ಪದೇ ಯಾಕೆ ಕರೆದು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಇ.ಡಿ ನೋಟಿಸ್ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ತನಿಖಾ ಸಂಸ್ಥೆಯವರು ಮತ್ತೆ ನೋಟಿಸ್ ಕೊಟ್ಟಿದ್ದಾರೆ.
ಮೊದಲು ಕೆಲವು ದಾಖಲಾತಿಗಳನ್ನು ಕೇಳಿದ್ದರು. ಇನ್ನು ಕೆಲವು ದಾಖಲೆಗಳನ್ನು ಅವರಿಗೆ ಕಳಿಸುತ್ತೇವೆ. ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಒಂದೇ ವಿಚಾರಕ್ಕೆ ಎರಡು ಪ್ರತ್ಯೇಕ ಪ್ರಕರಣ ದಾಖಲು ಮಾಡಿದ್ದಾರೆ. ಆ ರೀತಿ ಮಾಡಲು ಬರುವುದಿಲ್ಲ ಎಂದು ಆಕ್ಷೇಪಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇನೆ ಎಂದರು.
ಈ ವೇಳೆ ತುಮಕೂರಲ್ಲಿ ಬಾಣಂತಿ ಹಾಗೂ ಎರಡು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರಕ್ಕೆ ಮಾನವೀಯತೆ ಇಲ್ಲ. ಈ ಘಟನೆ ಸರ್ಕಾರದ ವೈಫಲ್ಯ, ಹಿಂದೆ ನಾನೊಮ್ಮೆ ಒಂದು ಮಾತನ್ನು ಹೇಳಿದ್ದೆ, ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಅಂತ. ಅದಕ್ಕೆ ಸಾಕ್ಷಿಯೇ ಈ ಘಟನೆ ಎಂದು ಬಸವರಾಜ ಬೊಮ್ಮಾಯಿ ಸರಕಾರದ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.ಕೋಲಾರ ಸೋಲಾರ್ ಪ್ರಾಜೆಕ್ಸ್ ಬಿಜೆಪಿ ಕ್ರೆಡಿಟ್ ಎಂಬ ವಿಚಾರವಾಗಿ ಮಾತನಾಡಿ, ಚರಿತ್ರೆಯನ್ನು ಯಾರು ಬದಲಾವಣೆ ಮಾಡಲು ಸಾಧ್ಯವಿಲ್ಲ, ನಾನೇನು ಕೆಲಸ ಮಾಡಿದ್ದೇನೆ ಎಂದು ನನ್ನ ಆತ್ಮಸಾಕ್ಷಿಗೆ ಗೊತ್ತು. ನಾನು ಮಾಡಿರುವ ಕೆಲಸವನ್ನ ಕೇಂದ್ರ ಸರ್ಕಾರ ಗುರುತಿಸಿದೆ. ವಿಶ್ವದ ದೊಡ್ಡ ಸೋಲಾರ್ ಪಾರ್ಕ್ ಎಂದು ಹೆಸರು ಬಂದಿದ್ದು, ಈ ಕೆಲಸಕ್ಕೆ ಪ್ರಧಾನಿಯವರೇ ನನಗೆ ಅವಾರ್ಡ್ ಕೊಟ್ಟಿದ್ದಾರೆ, ಬೇಕಾದರೆ ಪೋಟೋಗಳನ್ನು ನಾನು ರಿಲೀಸ್ ಮಾಡುತ್ತೇನೆ ಸತ್ಯವನ್ನ ಮುಚ್ಚುವ ಕೆಲಸ ಮಾಡಬಾರದು ಎಂದರು.