ಎಂತ ಕಾಲ ಬಂತಪ್ಪಾ! ಅಜ್ಜನ ಅಂತ್ಯಕ್ರಿಯೆ ವಿಡಿಯೋ ಪೋಸ್ಟ್ ಮಾಡಿದ ಯೂಟ್ಯೂಬರ್

ಬ್ಲಾಗರ್‌ಗಳು ಹಲವು ವಿಚಾರಗಳ ಬಗ್ಗೆ ಜನರಿಗೆ ತಿಳಿಸಲು, ಮಾಹಿತಿ ಒದಗಿಸಲು ನೆಟ್ಟಿಗರ ಜೊತೆ ಸಂಪರ್ಕದಲ್ಲಿರಲು ಸೌಂದರ್ಯ, ಫ್ಯಾಷನ್, ಟೆಕ್ನಾಲಜಿ, ಮನೆ, ಆಹಾರ, ಜ್ಯೋತಿಷ್ಯ ಹೀಗೆ ಹತ್ತಾರು ವಿಚಾರಗಳನ್ನು ಇಟ್ಟುಕೊಂಡು ಕಂಟೆಂಟ್ ಮತ್ತು ವಿಡಿಯೋ ಕ್ರಿಯೇಟ್ ಮಾಡಿ ಅವರ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.
ಹೀಗೆ ಯೂಟ್ಯೂಬರ್, ಇನ್‌ಸ್ಟಾಗ್ರಾಮ್ ಪ್ರಭಾವಿತರು ಹಂಚಿಕೊಳ್ಳುವ ವಿಚಾರಗಳು ಕೆಲವೊಮ್ಮೆ ಮಾಹಿತಿ ನೀಡಿ ಖುಷಿ ನೀಡಿದರೆ, ಇನ್ನೂ ಕೆಲ ಅತಿರೇಕದ ವಿಡಿಯೋಗಳು ಕಿರಿಕಿರಿ ಉಂಟು ಮಾಡುತ್ತವೆ.
ಹಾಗೇ ಇಲ್ಲೊಬ್ಬ ಖ್ಯಾತ ಯುಟ್ಯೂಬರ್ ಒಬ್ಬ ಹಂಚಿಕೊಂಡ ವಿಡಿಯೋ ನೋಡಿದರೆ ನಮ್ಮದೂ ಒಂದು ಇರ್ಲಿ ಅಂತಾ ನೀವೂ ಸಹ ಉಗಿದು ಉಪ್ಪಿನಕಾಯಿ ಹಾಕ್ತಿರ ನೋಡಿ.ಅಂತ್ಯಕ್ರಿಯೆ ವಿಡಿಯೋ ಹಂಚಿಕೊಂಡ ಯೂಟ್ಯೂಬರ್
ಲಕ್ಷಯ್ ಚೌಧರಿ ಓರ್ವ ಯೂಟ್ಯೂಬರ್ ವ್ಲಾಗರ್ ಆಗಿದ್ದು, ಎರಡು ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾರೆ. ಹಲವರು ಕಾಮಿಡಿ, ಟ್ರೋಲ್, ಪ್ರಾಂಕ್ ಹೀಗೆ ಅನೇಕ ರೀತಿಯ ವಿಡಿಯೋಗಳನ್ನು ಮಾಡಿ ತನ್ನ ಬಳಕೆದಾರರಿಗೆ ಹಂಚಿಕೊಳ್ಳುತ್ತಿದ್ದರು.
ಇಷ್ಟು ದಿನ ಹಂಚಿಕೊಂಡ ವಿಡಿಯೋಗಳು ಜನರಿಗೆ ಖುಷಿ ನೀಡಿವೆ, ಆದರೆ ಇತ್ತೀಚೆಗೆ ಹಂಚಿಕೊಂಡ ಅವರ ಅಜ್ಜನ ಅಂತ್ಯಕ್ರಿಯೆಯ ದೃಶ್ಯಾವಳಿಗಳು ನೆಟ್ಟಿಗರನ್ನು ಕೆರಳಿಸಿವೆ. ಕೆಲವು ಯೂಟ್ಯೂಬರ್‌ಗಳು ಸಹ ಈ ಹಿಂದೆ ಇಂತಹ ವಿಡಿಯೋಗಳನ್ನು ಹಂಚಿಕೊಂಡಿದ್ದರು, ಆಗ ಸ್ವತಃ ಲಕ್ಷಯ್ ಚೌಧರಿ ಅಂತಹ ವಿಡಿಯೋಗಳನ್ನು ಟೀಕಿಸಿದ್ದರು. ಆದರೆ ಪ್ರಸ್ತುತ ಅವರೇ ಇಂತಹ ಕೆಲಸ ಮಾಡಿದ್ದಾರೆ.
ಅಂತ್ಯಸಂಸ್ಕಾರದ ವಿಧಿ-ವಿಧಾನಗಳನ್ನು ಹಂಚಿಕೊಂಡ ಲಕ್ಷಯ್
ಮಾರ್ಚ್ 18ರಂದು ಅವರ ತಾಯಿಯ ತಂದೆ ತುಂಬು ಜೀವನ ನಡೆಸಿ ಕೊನೆಯುಸಿರೆಳೆದಿದ್ದಾರೆ. ಈ ವೇಳೆ ಚೌಧರಿ ಅವರ ತಾತನ ಸಾವಿನ ಎಲ್ಲಾ ವಿಧಿವಿಧಾನಗಳನ್ನು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
ʻನಾನಾಜಿಯ ಕೊನೆಯ ದರ್ಶನʼ ಎಂದು ಶೀರ್ಷಿಕೆ ನೀಡಿ ಅಂತ್ಯಕ್ರಿಯೆಯ ಎಲ್ಲಾ ಕ್ರಿಯೆಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಅವರು ಟ್ವಿಟರ್‌ನಲ್ಲೂ ಹಂಚಿಕೊಂಡಿದ್ದಾರೆ.
ಆದರೆ ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ಬೆರಗಾಗಿದ್ದು ಇದನ್ನೆಲ್ಲಾ ಹಂಚಿಕೊಳ್ಳುವ ಅಗತ್ಯತೆ ಏನಿದೆ ಅಂತಾ ಮೂಗು ಮುರಿದಿದ್ದಾರೆ. ಹಲವು ಬಳಕೆದಾರರು ಟೀಕೆ ಮಾಡಿದ್ದು, ಕಿಡಿಕಾರಿದ್ದಾರೆ.
ಲಕ್ಷಯ್ ಚೌಧರಿಗೆ ಹಿಗ್ಗಾಮುಗ್ಗಾ ತರಾಟೆ
ಬಳಕೆದಾರರು ಲಕ್ಷಯ್ ಚೌಧರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು ಅವರ ಫೋಟೋ ಹಾಕಿ ಟ್ರೋಲ್ ಮಾಡಿದ್ದಾರೆ. ಕಾಮೆಂಟ್ ವಿಭಾಗ ಕೂಡ ವ್ಯಂಗ್ಯ, ಟೀಕೆಗಳಿಂದ ತುಂಬಿ ಹೋಗಿದೆ.
ಓರ್ವ ಬಳಕೆದಾರ ತಾತ ತಮ್ಮ ಕೊನೆಗಾಲದಲ್ಲೂ ಮೊಮ್ಮಗನಿಗೆ ವಿಡಿಯೋ ಮಾಡಲು ಕಟೆಂಟ್ ಕೊಟ್ಟು ಹೋಗಿದ್ದಾರೆ ಎಂದು ಬರೆದಿದ್ದಾರೆ. ಇನ್ನೂ ಕೆಲವರು ಲಕ್ಷಯ್ ಚೌಧರಿಯನ್ನು ಕಪಟಿ, ಲೈಕ್ ಕಾಮೆಂಟ್, ವೀಕ್ಷಣೆಗಳನ್ನು ಗಳಿಸಲು ಏನು ಬೇಕಾದರೂ ಮಾಡುತ್ತಾರೆ ಅಂತೆಲ್ಲಾ ಟೀಕಿಸಿದ್ದಾರೆ.
ಭಾರಿ ಟೀಕೆ, ಟ್ರೋಲ್‌ಗಳ ನಂತರ ಲಕ್ಷಯ್ ಚೌಧರಿ ಹಳ್ಳಿಯ ಹಳೇ ದಿನಗಳು ಅಂತಾ ಶೀರ್ಷಿಕೆ ಬದಲಾಯಿಸಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಈಗೀಗ ಸೋಶಿಯಲ್ ಮೀಡಿಯಾ ಪ್ರಭಾವಿತರು ವೀವರ್ಸ್‌ಗಳನ್ನು ಪಡೆಯಲು ಕೆಲ ಅತಿರೇಕಕ್ಕೂ ಇಳಿದಿದ್ದಾರೆ ಎನ್ನಬಹುದು. ಎಲ್ಲರನ್ನೂ ಈ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ, ಅನೇಕರು ಜನರಿಗೆ ಉಪಯುಕ್ತ ಮಾಹಿತಿಯನ್ನು ಸಹ ರವಾನೆ ಮಾಡುತ್ತಿದ್ದಾರೆ.
ಇಂತಹ ವಿಡಿಯೋಗಳು ಕೆಲವೊಮ್ಮೆ ಸೂಕ್ಷ್ಮ ಮನಸ್ಸಿನವರಿಗೆ ಘಾಸಿ ಮಾಡಬಹುದು. ಹೀಗಾಗಿ ಯಾವುದೇ ಇನ್‌ಫ್ಲೂಯೆನ್ಸರ್ ಎಲ್ಲರ ಹಿತದೃಷ್ಟಿಯ ಮೆರೆಗೆ ಕಟೆಂಟ್, ವಿಡಿಯೋ ಹಂಚಿಕೊಳ್ಳಬೇಕು.