ಒಂದೇ ವೇದಿಕೆಯಲ್ಲಿ ದರ್ಶನ್, ಸುದೀಪ್, ಎನ್‌ಟಿಆರ್, ರಮ್ಯಾ; ಇದು ಸರ್ಕಾರವೇ ನಡೆಸುವ ಕಾರ್ಯಕ್ರಮ

ಒಂದೇ ವೇದಿಕೆಯಲ್ಲಿ ದರ್ಶನ್, ಸುದೀಪ್, ಎನ್‌ಟಿಆರ್, ರಮ್ಯಾ; ಇದು ಸರ್ಕಾರವೇ ನಡೆಸುವ ಕಾರ್ಯಕ್ರಮ

ಟ ದರ್ಶನ್ ಹಾಗೂ ಸುದೀಪ್ ಇಬ್ಬರ ನಡುವೆ ಮನಸ್ತಾಪ ಇರುವುದು ತಿಳಿದಿರುವ ವಿಷಯವೇ. ಮೆಜೆಸ್ಟಿಕ್ ಚಿತ್ರದಲ್ಲಿ ದರ್ಶನ್ ಅವರಿಗೆ ಅವಕಾಶ ನೀಡಿ ಎಂದು ನಾನು ಸೂಚಿಸಿದ್ದೆ ಎಂದು ಸುದೀಪ್ ನೀಡಿದ್ದ ಹೇಳಿಕೆಯಿಂದ ದರ್ಶನ್ ಸುದೀಪ್ ಅವರಿಂದ ದೂರಾಗಿ 'ಇನ್ನು ನಾನು ಹಾಗೂ ಸುದೀಪ್ ಸ್ನೇಹಿತರಲ್ಲ' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಹೀಗೆ ತಮ್ಮಿಬ್ಬರ ನಡುವೆ ಯಾವುದೇ ಸ್ನೇಹ ಸಂಬಂಧ ಇನ್ನು ಮುಂದೆ ಇರುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದ ದರ್ಶನ್ ಸುದೀಪ್ ಕುರಿತಾಗಿ ಎಲ್ಲಿಯೂ ಸಹ ಮಾತನ್ನು ಆಡಿರಲಿಲ್ಲ. ಇನ್ನು ದರ್ಶನ್ ಅವರ ಈ ಪೋಸ್ಟ್ ಕುರಿತಾಗಿ ಸುದೀಪ್ ಸಹ ಯಾವುದೇ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿಯೇ ಉಳಿದುಕೊಂಡಿದ್ದರು. ಆದರೆ ಇತ್ತೀಚೆಗಷ್ಟೆ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಹಾಡು ಬಿಡುಗಡೆ ಮಾಡುವ ವೇಳೆ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದರ ಕುರಿತು ಸುದೀಪ್ ಪ್ರತಿಕ್ರಿಯೆ ನೀಡಿದ್ದರು.

ಈ ಘಟನೆ ಹಲವಾರು ವರ್ಷಗಳಿಂದ ಪರಸ್ಪರ ಮಾತನಾಡದ ಸುದೀಪ್ ಹಾಗೂ ದರ್ಶನ್ ನಡುವೆ ಪುಟ್ಟ ಸಂಭಾಷೆಣೆ ನಡೆಯುವಂತೆ ಮಾಡಿತ್ತು. ಹೌದು, ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದನ್ನು ಖಂಡಿಸಿದ್ದ ಸುದೀಪ್ ದರ್ಶನ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ದರ್ಶನ್ ಧನ್ಯವಾದ ತಿಳಿಸಿದ್ದರು. ಇಬ್ಬರ ನಡುವಿನ ಈ ಆನ್‌ಲೈನ್ ಸಂಭಾಷಣೆ ಕಂಡ ನೆಟ್ಟಿಗರು ಹಾಗೂ ಅಭಿಮಾನಿಗಳು ಈ ಇಬ್ಬರೂ ಸಹ ಆದಷ್ಟು ಬೇಗ ಒಂದಾಗಲಿ ಎಂದು ಆಶಿಸಿದ್ದರು. ಅಭಿಮಾನಿಗಳ ಈ ಆಶಯ ಈಗ ನೆರವೇರುವ ಸಮಯ ಹತ್ತಿರ ಬಂದಂತಿದೆ. ರಾಜ್ಯ ಸರ್ಕಾರ ನಡೆಸುತ್ತಿರುವ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮದ ವೇದಿಕೆ ಮೇಲೆ ದರ್ಶನ್ ಹಾಗೂ ಸುದೀಪ್ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.