ಬೆಂಗಳೂರು: ಬುದ್ಧಿಮಾಂದ್ಯ ಮಗು ಕೊಂದ ತಾಯಿ ವಿರುದ್ಧ ಕೋರ್ಟ್ ಗೆ ಚಾರ್ಜ್‍ಶೀಟ್ ಸಲ್ಲಿಕೆ

ಬೆಂಗಳೂರು: ಬುದ್ಧಿಮಾಂದ್ಯ ಮಗು ಕೊಂದ ತಾಯಿ ವಿರುದ್ಧ ಕೋರ್ಟ್ ಗೆ ಚಾರ್ಜ್‍ಶೀಟ್ ಸಲ್ಲಿಕೆ

ಬೆಂಗಳೂರು, ; ಬುದ್ಧಿಮಾಂದ್ಯನಾಗಿದ್ದ ಕಾರಣಕ್ಕೆ ಐದು ವರ್ಷದ ಮಗುವನ್ನು ಹೆತ್ತ ತಾಯಿಯೇ ನಾಲ್ಕನೆ ಮಹಡಿ ಮೇಲಿಂದ ಬಿಸಾಕಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಂಗಿರಾಮನಗರ ಪೊಲೀಸರು ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

ತಾಯಿ ಸುಷ್ಮಾ ಭಾರದ್ವಾಜ್ ತನ್ನ ಬುದ್ಧಿಮಾಂದ್ಯ ಮಗುವನ್ನು ನಾಲ್ಕನೇ ಮಹಡಿ ಮೇಲಿಂದ ಎಸೆದು ಕೊಂದಿದ್ದಳು.

ಘಟನೆ ಸಿಸಿಟಿವಿಯಲ್ಲೂ ಸೆರೆಯಾಗಿದ್ದು ತಾಯಿಯ ಬಂಧಿಸಿದ್ದ ಸಂಪಂಗಿ ರಾಮನಗರ ಪೊಲೀಸರು ಕೇಸ್ ಸಂಬಂಧ ತನಿಖೆ ನಡೆಸಿದ್ದು ಬರೋಬ್ಬರಿ 193 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಮಗುವನ್ನು ಬಿಸಾಡಿದ್ದನ್ನ ಪ್ರತ್ಯಕ್ಷವಾಗಿ ಕಂಡಿದ್ದ ಮೂವರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣದ ಸಂಬಂಧ ಬರೋಬ್ಬರಿ 34 ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಹಾಗೂ ಚಾರ್ಜ್‍ಶೀಟ್ ನಲ್ಲಿ ಮಗುವಿನ ಖಾಯಿಲೆ ಬಗ್ಗೆಯೂ ಉಲ್ಲೇಖಿಸಲಾಗಿದೆ. ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್‍ನಲ್ಲಿ, ಮೃತ ಮಗು ಬುದ್ಧಿಮಾಂದ್ಯ ಮಗುವಲ್ಲ, ಅದು ಆಯುಟಿಸಮ್ ಖಾಯಿಲೆಯಿಂದ ಬಳಲುತ್ತಿದ್ದ ಮಗು. ಹೀಗಾಗಿ ಪ್ರತಿನಿತ್ಯ ಥೆರಫಿ ಮಾಡಿಸಲು ಮಗುವನ್ನು ತಾಯಿ ಸುಷ್ಮಾ ಕರೆದೊಯ್ತಿದ್ದರು.

ಇದೇ ಕಾರಣಕ್ಕೆ ಮಗುವಿನಿಂದ ಬೇಸತ್ತು, ನೋಡಿಕೊಳ್ಳಲಾಗುವುದಿಲ್ಲ ಎಂದು ಮಗುವನ್ನು ತಾಯಿಯೇ ಕೊಂದಿದ್ದಾಳೆ ಎಂದು ಉಲ್ಲೇಖಿಸಲಾಗಿದೆ. ಎರಡು ಬಾರಿ ಮಗು ಬಿಸಾಡಲು ಹೊರಗಡೆ ಬಂದು ನೋಡಿದ್ದಾಳೆ. ಬಳಿಕ ಅಡ್ಡಲಾಗಿದ್ದ ಮರವನ್ನು ಗಮನಿಸಿ ಅಲ್ಲಿಂದ ದೂರ ಬಂದು ಕಲ್ಲಿನ ಗಟ್ಟಿ ನೆಲದ ಸ್ಥಳವನ್ನು ನೋಡಿ ಮಗುವನ್ನು ಬಿಸಾಡಿರೋದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾರ್ಯಕ್ರಮಗಳಿಗೆ ಹೋದಾಗ ಮಗುವನ್ನು ನೋಡಿ ಸಂಬಂಧಿಕರು ನುಡಿಯುತ್ತಿದ್ದ ಕೊಂಕಿನ ಮಾತಿಂದ ಬೇಸತ್ತಿದ್ದ ಸುಷ್ಮಾಗೆ ಮಗುವಿನ ಆರೈಕೆಯೇ ಕಷ್ಟವಾಗಿತ್ತು.

ಇನ್ನು ಆರೋಪಿ ತಾಯಿ ಸುಷ್ಮಾಳ ಆರೋಗ್ಯದ ಪರಿಸ್ಥಿತಿಯ ವರದಿಯಲ್ಲಿ ಅಚ್ಚರಿ ಮಾಹಿತಿ ಬೆಳಕಿಗೆ ಬಂದಿದೆ. ಘಟನೆ ಬಳಿಕ ಸುಷ್ಮಾಳನ್ನು ಪೊಲೀಸರು ನಿಮಾನ್ಸ್‍ಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದು ರಿಪೋರ್ಟ್ ಬಂದಿದೆ. ರಿಪೋರ್ಟ್‍ನಲ್ಲಿ ಸುಷ್ಮಾ ಮಾನಸಿಕವಾಗಿ ಕುಗ್ಗಿದ್ದರು, ಖಿನ್ನತೆ ಎಂಬುದು ಸುಳ್ಳು. ಆಕೆ ಆರೋಗ್ಯವಾಗಿದ್ದಾಳೆ. ಯಾವುದೇ ಸಮಸ್ಯೆ ಇಲ್ಲವೆಂದು ಮಾಹಿತಿ ಬಂದಿದೆ. ಈ ಮೂಲಕ ಉದ್ದೇಶಪೂರ್ವಕವಾಗಿ ಮಗು ಕೊಂದದ್ದು ತನಿಖೆಯಲ್ಲಿ ಸಾಬೀತಾಗಿದೆ.