ಕೆರೆಯ ಒತ್ತುವರಿ ಜಾಗೆ ತೆರವಿಗೆ ಪ್ರತಿಭಟನೆ

ದೊಡ್ಡಬಳ್ಳಾಪುರ ಗ್ರಾಮದ ಗುಂಡುತೋಪು, ಗೋಕಟ್ಟೆ, ಕೆರೆಯ ಒತ್ತುವರಿ ಜಮೀನು ಸೇರಿದಂತೆ ಗ್ರಾಮದಲ್ಲಿನ ಸರ್ಕಾರಿ ಜಾಗವನ್ನು ಗ್ರಾಮದ ಹಲವಾರು ಜನರು ಒತ್ತುವರಿ ಮಾಡಿದ್ದು ತೆರವುಗೊಳಿಸುವಂತೆ ಕಸಾಘಟ್ಟ ಗ್ರಾಮಸ್ಥರು ಇಂದು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಗ್ರಾಮದ ಸರ್ಕಾರಿ ಗುಂಡುತೋಪಿನಲ್ಲಿ ೪ ಎಕರೆ, ಗೋಮಾಳದಲ್ಲಿ ೧೮೪ ಎಕರೆ, ಗೋಕಟ್ಟೆಯಲ್ಲಿ ೩ ಎಕರೆ, ಕೆರೆಯಂಗಳ ೬೨ ಎಕರೆ, ಸರ್ಕಾರಿ ತೋಪು ೮ ಎಕರೆ ಇದೆ, ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರಿ ಜಾಗ ಬಳಕೆಯಾಗಬೇಕಿತ್ತು. ಆದರೆ ಗ್ರಾಮದ ಬಲಾಢ್ಯರು ಸರ್ಕಾರಿ ಜಾಗಗಳನ್ನ ಒತ್ತುವರಿ ಮಾಡಿಕೊಂಡು ಜಾನುವಾರುಗಳು ಮೇಯಲು ಜಾಗವಿಲ್ಲದಂತೆ ಮಾಡಿದ್ದಾರೆ. ಗ್ರಾಮದ ಸರ್ವೆನಂಬರ್ ೩೬ ರಲ್ಲಿ ೬೨ ಎಕರೆ ಕೆರೆ ಇದ್ದು, ಕೆರೆಯ ಅಂಚಿನಲ್ಲಿರುವ ರೈತರು ಕೆರೆಯ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ಒತ್ತುವರಿ ಮಾಡಿದ ಜಾಗದಲ್ಲಿ ತರಕಾರಿ ಬೆಳೆಯುತ್ತಿದ್ದಾರೆ. ಗೋಕಟ್ಟೆ ಒತ್ತುವರಿ ಮಾಡಿ ಧನದ ಕಟ್ಟಿಗೆ ನಿರ್ಮಿಸಿದ್ದಾರಂತೆ. ಇದೆ ಜಾಗದಲ್ಲಿ ದನ ಕರು ಮೇಯಿಸಲು ಹೋದಾಗ ಅಲ್ಲಿ ಜಮೀನು ಒತ್ತುವರಿ ಮಾಡಿರುವ ಜನರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ ಎಂದು ಆರೋಪ ಮಾಡಿದರು. ಕೂಡಲೇ ಒತ್ತುವರಿ ಮಾಡಿರುವ ಜಾಗೆ ತೆರವುಗೊಳಿಸುವಂತೆ ಪ್ರತಿಭಟನೆ ಮಾಡಿ ನಂತರ ತಹಶಿಲ್ದಾರ್ ಗೆ ಮನವಿ ಪತ್ರವನ್ನು ನೀಡಿದರು.