ಸೆಪ್ಟೆಂಬರ್ 13ರಂದು ವಿಧಾನಸೌಧಕ್ಕೆ ರೈತರ ಮುತ್ತಿಗೆ | Bangalore |

ಕೃಷಿ ಸಂಬಂಧಿತ ಸುಗ್ರೀವಾಜ್ಞೆಗಳನ್ನು ತಡೆಹಿಡಿಯುವುದಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಸೆಪ್ಟೆಂಬರ್ 13ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಭಾರತ ಸರ್ಕಾರದ ಸುಗ್ರೀವಾಜ್ಞೆ ಹಾಗೂ ರೈತರು ನಡೆಸುತ್ತಿರುವ ಹೋರಾಟವನ್ನು ಗಮನಿಸಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಸುಗ್ರೀವಾಜ್ಞೆಗಳನ್ನು ತಡೆಹಿಡಿಯುವಂತೆ ನಿರ್ದೇಶನ ನೀಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿ ಮುತ್ತಿಗೆ ಹಾಕಲಾಗುವುದು. ಹಾಗೆಯೇ ಉತ್ತರಪ್ರದೇಶದ ಮುಜಫರ್ ನಗರದಲ್ಲಿ ರೈತ ಮುಖಂಡರು ಇದೇ ತಿಂಗಳ 27ನೇ ತಾರೀಖಿನಂದು ಭಾರತ್ ಬಂದ್ ಮಾಡಲು ನಿರ್ಣಯ ಕೈಗೊಂಡಿದ್ದು ನಾವು ಕೂಡ ಬೆಂಬಲ ನೀಡಲಿದ್ದೇವೆ ಎಂದೂ ಅವರು ತಿಳಿಸಿದರು.