ಅಂಬಾಬಾಯಿ ದೇವಿ ದರ್ಶನಕ್ಕೆ ಡಬಲ್‌ ಡೋಸ್‌ ಕಡ್ಡಾಯ!

ಅಂಬಾಬಾಯಿ ದೇವಿ ದರ್ಶನಕ್ಕೆ ಡಬಲ್‌ ಡೋಸ್‌ ಕಡ್ಡಾಯ!

ಆಳಂದ: ದಸರಾ ಉತ್ಸವ ಅಂಗವಾಗಿ ಕರ್ನಾಟಕ ಗಡಿ ಜಿಲ್ಲೆಗಳಿಂದ ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆ ತುಳಜಾಪುರ ಅಂಬಾಬಾಯಿ ದೇವಿ ದರ್ಶನಕ್ಕೆ ತೆರಳುವ ಲಕ್ಷಾಂತರ ಭಕ್ತರನ್ನು ಅಲ್ಲಿನ ಆಡಳಿತ ಗಡಿಯಲ್ಲೇ ತಡೆದು ಕೋವಿಡ್‌ ತಪಾಸಣೆ ಕಾರ್ಯ ಆರಂಭಿಸಿದ್ದರಿಂದ ಬಹುತೇಕ ಭಕ್ತರು ದೇವಿ ದರ್ಶನವಿಲ್ಲದೇ ಮರಳುತ್ತಿದ್ದಾರೆ.

ಕಲಬುರಗಿ, ಬೀದರ್‌, ರಾಯಚೂರು, ಕೊಪ್ಪಳ, ವಿಜಯಪುರ, ಬೆಳಗಾವಿ, ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಪಟ್ಟಣ ಮತ್ತು ಗ್ರಾಮೀಣ ಭಾಗದ ಭಕ್ತರು ಲಸಿಕೆ ಪಡೆಯದೆ, ಆರ್‌ಟಿಪಿಸಿಆರ್‌ ವರದಿಯಿಲ್ಲದೆ ಬರುವವರನ್ನು ಗಡಿಯಲ್ಲೇ ತಡೆದು ವಾಪಸ್‌ ಕಳುಹಿಸಲು ಉಸ್ಮಾನಾಬಾದ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಳ್ಳಲು ಮುಂದಾಗಿದೆ.

ರಾಜ್ಯದ ಗಡಿಗೆ ಹೊಂದಿಕೊಂಡ ಖಜೂರಿ ಹತ್ತಿರದ ಮಹಾರಾಷ್ಟ್ರದ ಖಸಗಿ, ಬೀದರ್‌ ಜಿಲ್ಲೆಯ ಬಸವ ಕಲ್ಯಾಣ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಕುಲಮುಡ್‌ ಬಳಿ ಉಸ್ಮಾನಾಬಾದ ಜಿಲ್ಲಾಡಳಿತ ಕೋವಿಡ್‌-19 ತಪಾಸಣೆಯ ಚೆಕ್‌ಪೋಸ್ಟ್‌ ಸ್ಥಾಪಿಸಿ ಕಾರ್ಯಾಚರಣೆ ಆರಂಭಿಸಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಇನ್ಯಾವುದೇ ರಾಜ್ಯದಿಂದ ಸಾರಿಗೆ ಬಸ್‌ ಅಥವಾ ಖಾಸಗಿ ವಾಹನಗಳ ಮೂಲಕ ಮಹಾರಾಷ್ಟ್ರಕ್ಕೆ ಬರುವ ಪ್ರಯಾಣಿಕರಿಗೆ ತಪಾಸಣೆ ನಡೆಸಲು ಅಲ್ಲಿನ ಆಡಳಿತ ಬಿಗಿ ಕ್ರಮ ಅನುಸರಿಸಿದೆ.

ಅಲ್ಲದೇ, ಆಳಂದ ಹಾಗೂ ಬಸವಕಲ್ಯಾಣ ಸಾರಿಗೆ ಸಂಸ್ಥೆಯ ಬಸ್‌ ಘಟಕ ಅಧಿಕಾರಿಗಳಿಗೆ ಉಮರ್ಗಾ ಠಾಣೆ ಅಧಿಕಾರಿಗಳ ಕೋರಿಕೆಯ ಪತ್ರ ರವಾನಿಸಿದ್ದು, ಕೋವಿಡ್‌-19 ಮಾನದಂಡ ಇಲ್ಲದೇ ಪ್ರಯಾಣಿಕರನ್ನು ಬಸ್‌ಗಳಲ್ಲಿ ಕರೆತರುವಂತಿಲ್ಲ. ಒಂದು ವೇಳೆ ಕರೆತಂದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇಷ್ಟಕ್ಕೆ ನಿಲ್ಲದೇ ಹೊರರಾಜ್ಯದಿಂದ ಮಹಾರಾಷ್ಟ್ರಕ್ಕೆ ಬರುವ ಮೊದಲೇ ಬಸ್‌ ಹತ್ತುವಾಗಲೇ ಪ್ರಯಾಣಿಕರಲ್ಲಿ ಆರ್‌ಟಿಪಿಸಿಆರ್‌ ವರದಿ, ರಾಪಿಡ್ ಟೆಸ್ಟ್‌ ವರದಿ, ಎರಡು ಬಾರಿ ವ್ಯಾಕ್ಸಿನ್‌ ಪಡೆದ ಪ್ರಮಾಣ ಪತ್ರ, ಮಾಸ್ಕ್ ಕಡ್ಡಾಯವಾಗಿ ಧರಿಸಿದ್ದರೆ ಮಾತ್ರ ಪ್ರಯಾಣಿಕರಿಗೆ ವಾಹನದಲ್ಲಿ ಪ್ರವೇಶ ನೀಡಬೇಕು ಎಂದು ಉಸ್ಮಾನಾಬಾದ ಆಡಳಿತ ಗಡಿ ತಾಲೂಕುಗಳ ಸಾರಿಗೆ ಸಂಸ್ಥೆ ಘಟಕಾ ಅಧಿಕಾರಿಗಳಿಗೆ ನೀಡಿದ ಪತ್ರದಲ್ಲಿ ಉಲ್ಲೇಖೀಸಿದೆ.

ಹಿರೋಳಿ ಗಡಿಯಿಂದಲೂ ಬಸ್‌ ಆರಂಭಿಸಿ
ಕಲಬುರಗಿ ಆಳಂದನಿಂದ ಸೊಲ್ಲಾಪುರ, ಅಕ್ಕಲಕೋಟ, ಮುಂಬೈ, ಪುಣೆಗೆ ಹೋಗಲು ಸಾರಿಗೆ ಸಂಸ್ಥೆ ಸಂಚಾರ ನಿಷೇಧ ಹಿಂದಕ್ಕೆ ಪಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹಗಲಿನಲ್ಲಿ ನಿರ್ಬಂಧ, ರಾತ್ರಿ ಕದ್ದುಮುಚ್ಚಿ ಪ್ರವೇಶ ನೀಡಲಾಗುತ್ತಿದೆ. ರಾಜ್ಯದ ಗಡಿಯಲ್ಲಿ ಇದುವರೆಗೂ ಕಲಬುರಗಿ ಜಿಲ್ಲಾಡಳಿತ ಕೋವಿಡ್‌ ತಪಾಸಣೆಗೆ ನಾಕಾಬಂದಿ ಹಾಕಿದರೂ ಸಹಿತ ಕಟ್ಟುನಿಟ್ಟಿನ ತಪಾಸಣೆಯಿಲ್ಲ. ಉಮರ್ಗಾ, ಮಾದನಹಿಪ್ಪರಗಾ, ಎರಡು ಗಡಿಗಳಲ್ಲಿ ಮಾತ್ರ ಬಸ್‌ ಸಂಚರಿಸುತ್ತಿವೆ. ಆದರೆ ಸೊಲ್ಲಾಪೂರಕ್ಕೆ ಸಂಪರ್ಕ ಒದಗಿಸುವ ಗಡಿ ಹಿರೋಳಿಯಿಂದ ಇನ್ನೂ ಬಸ್‌ ಸಂಚಾರಕ್ಕೆ ಅನುಮತಿ ನೀಡುತ್ತಿಲ್ಲ. ಕೂಡಲೇ ಬಸ್‌ ಸಂಚಾರ ಕಲ್ಪಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾರು, ಜೀಪ್‌, ಮ್ಯಾಕ್ಸಿಕ್ಯಾಬ್‌, ದ್ವಿಚಕ್ರ ವಾಹನ ಹೀಗೆ ಎಲ್ಲ ಪ್ರವಾಸಿಗರ ತಪಾಸಣೆಗೂ ಖಾಸಗಿ ಮತ್ತು ಬಸವಕಲ್ಯಾಣ ಮಾರ್ಗದ ಹೆದ್ದಾರಿ ಬಳಿಯ ಕಲಮುಡ್‌ ಸೇರಿ ಎರಡು ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ. 65 ವರ್ಷ ಮೇಲ್ಟಟ್ಟವರು, ಚಿಕ್ಕ ಮಕ್ಕಳು, ಗರ್ಭಿಣಿಯರಿಗೆ ದೇವಿ ದರ್ಶನ ನಿರ್ಬಂಧಿಸಲಾಗಿದೆ. ಆರ್‌ಟಿಪಿಸಿಆರ್‌ ವರದಿ, ಎರಡು ಬಾರಿ ಲಸಿಕೆ ಪಡೆದ ಪ್ರಮಾಣ ಪತ್ರ, ದರ್ಶನಕ್ಕೆ ಆನ್‌ಲೈನ್‌ ಪಾಸ್‌ ಕಡ್ಡಾಯ ಮಾಡಲಾಗಿದೆ.