ಆನ್‌ ಲೈನ್‌ ಮೂಲಕ ಎಲೆಕ್ಟ್ರಿಕ್‌ ಬಿಲ್‌ ಪಾವತಿಸುವ ಬೆಂಗಳೂರು ನಿವಾಸಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಆನ್‌ ಲೈನ್‌ ಮೂಲಕ ಎಲೆಕ್ಟ್ರಿಕ್‌ ಬಿಲ್‌ ಪಾವತಿಸುವ ಬೆಂಗಳೂರು ನಿವಾಸಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರಿಗರು ; ಈ ತಿಂಗಳು ಕರೆಂಟ್‌ ಬಿಲ್‌ ಕಟ್ಟಬೇಡಿ. ಹೀಗಂತ ನಾವ್‌ ಹೇಳ್ತಿಲ್ಲ, ಖುದ್ದು ಬೆಸ್ಕಾಂ ಸೂಚನೆ ನೀಡಿದೆ. ಇ-ಪೇಮೆಂಟ್‌ ಸಿಸ್ಟಮ್‌ನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿರುವುದರಿಂದ ಈ ತಿಂಗಳು ಆನ್‌ಲೈನ್‌ನಲ್ಲಿ ಬಿಲ್‌ಗಳನ್ನು ಪಾವತಿಸದಂತೆ ಗ್ರಾಹಕರಿಗೆ ಬೆಸ್ಕಾಂ ಸೂಚನೆ ನೀಡಿದೆ.

ಆನ್‌ಲೈನ್‌ ಬದಲು ಖುದ್ದು ಕಚೇರಿಗೆ ಬಂದು ಬಿಲ್‌ ಪಾವತಿ ಮಾಡುವಂತೆ ಹೇಳಿದೆ. ಬೆಸ್ಕಾಂನ ಡಿಜಿಟಲ್ ಪಾವತಿ ಗೇಟ್‌ವೇ ಆನ್‌ಲೈನ್‌ನಲ್ಲಿ ಬಿಲ್‌ಗಳನ್ನು ಪಾವತಿಸಲು ಪ್ರಯತ್ನಿಸಿದಾಗ ಅನೇಕ ಗ್ರಾಹಕರಿಗೆ ಮೂಲ ಬಿಲ್‌ಗಳಿಗಿಂತ ಹೆಚ್ಚಿನ ಮೊತ್ತವನ್ನು ತೋರಿಸಿದೆ. ಬೆಸ್ಕಾಂ ಪೋರ್ಟಲ್‌ನಲ್ಲಿ ಮಾತ್ರವಲ್ಲದೆ ಇತರ ಪಾವತಿ ಅಪ್ಲಿಕೇಶನ್‌ಗಳಲ್ಲಿಯೂ ತಪ್ಪಾದ ಮೊತ್ತವನ್ನು ತೋರಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ನಗರದ ನಿವಾಸಿಯೊಬ್ಬರ ಪ್ರಕಾರ, ಮೂಲ ಬಿಲ್ ಕೇವಲ 1800 ರೂಪಾಯಿ ಆಗಿದ್ದು, 5400 ರೂಪಾಯಿ ಪಾವತಿಸಲು ಕೇಳಲಾಯಿತು. ಇದೇ ರೀತಿ 830 ರೂಪಾಯಿ ಬಿಲ್‌ಗೆ ಪೋರ್ಟಲ್‌ನಲ್ಲಿ 4000 ರೂಪಾಯಿ ತೋರಿಸುತ್ತಿದೆಯಂತೆ. ಹಲವಾರು ಗ್ರಾಹಕರಿಗೆ ಈ ರೀತಿ ತೊಂದರೆಯಾಗಿದೆ. ಈ ಲೋಪದೋಷದ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಕೇಳಿದರೂ ಸ್ಪಂದಿಸುತ್ತಿಲ್ಲ ಎಂದು ಕೆಲ ಗ್ರಾಹಕರು ಆರೋಪಿಸಿದ್ದಾರೆ.ಈ ಮಧ್ಯೆ ಬೆಸ್ಕಾಂ ದೋಷವನ್ನು ಗುರುತಿಸಿದ್ದು, ನವೆಂಬರ್ 1 ರಿಂದಲೂ ಅದನ್ನು ಪರಿಹರಿಸಲು ಪ್ರಯತ್ನಿಸುತ್ತಿದೆಯಂತೆ. ಸಮಸ್ಯೆ ಬಗೆಹರಿಯುವವರೆಗೆ ಆನ್‌ಲೈನ್‌ ಪಾವತಿ ಬೇಡವೆಂದು ಬೆಸ್ಕಾಂ ಸೂಚನೆ ನೀಡಿದೆ.

ಬೆಸ್ಕಾಂ ಎಂಡಿ ಮಹಾಂತೇಶ ಬಿಳಗಿ, ಬೆಂಗಳೂರಿಗರು ಸಹಾಯವಾಣಿ 1912 ಅನ್ನು ಸಂಪರ್ಕಿಸುವ ಮೂಲಕ ಮೊತ್ತದಲ್ಲಿನ ವ್ಯತ್ಯಾಸದ ಬಗ್ಗೆ ದೂರು ನೀಡುವಂತೆ ಕೇಳಿದ್ದಾರೆ. ಈ ಹಿಂದೆ ಹಲವಾರು ಗ್ರಾಹಕರಿಗೆ ಬಿಲ್‌ ಮೊತ್ತ ಆನ್‌ಲೈನ್‌ ಪೇಮೆಂಟ್‌ ಸಿಸ್ಟಮ್‌ನಲ್ಲಿ ಗೋಚರಿಸುತ್ತಿರಲಿಲ್ಲ. ಈ ಮಧ್ಯೆ ತುರ್ತು ಹಣ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ನಗರದ ನಿವಾಸಿಗಳಿಗೆ ಇತ್ತೀಚೆಗೆ ನಕಲಿ ಎಸ್‌ಎಂಎಸ್ ಕೂಡ ಬಂದಿತ್ತು. ಇದೊಂದು ಮೋಸ ಎಂದು ಬೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಗ್ರಾಹಕರು ಇದಕ್ಕೆ ಬಲಿಯಾಗದಂತೆ ಸೂಚಿಸಿದ್ದಾರೆ.