ಅಫ್ಘಾನಿಸ್ತಾನವನ್ನು ಉಗ್ರರ ತಾಣವಾಗಲು ಬಿಡಲ್ಲ; ಬೈಡೆನ್
ಅಫ್ಘಾನಿಸ್ತಾನವನ್ನು ಉಗ್ರರ ತಾಣವಾಗಲು ಬಿಡಲ್ಲ; ಬೈಡೆನ್
ವಾಷಿಂಗ್ಟನ್:.ತಾಲಿಬಾನ್ ವಿಚಾರದಲ್ಲಿ ಜಿ-7 ರಾಷ್ಟ್ರಗಳು ಒಂದೇ ನಿಲುವನ್ನು ಹೊಂದಿವೆ. ಒಂದು ವೇಳೆ ಆಫ್ಘಾನ್‍ನಲ್ಲಿ ಶಸ್ತ್ರಧಾರಿಗಳು ಸರ್ಕಾರ ರಚನೆ ಮಾಡಿ ಆ ರಾಷ್ಟ್ರವನ್ನು ಭಯೋತ್ಪಾದಕರ ಮೂಲತಾಣವನ್ನಾಗಿಸಿಕೊಳ್ಳಲು ಮುಂದಾದರೆ ಅವಕಾಶ ನೀಡುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ಜಿ-7 ಬ್ಲಾಕ್, ವಿಶ್ವಸಂಸ್ಥೆ, ನ್ಯಾಟೋ ಮತ್ತು ಯೂರೋಪಿಯನ್ ಒಕ್ಕೂಟದ ಮುಖಂಡರೊಂದಿಗೆ ವರ್ಚುಯಲ್ ಸಭೆ ನಡೆಸಿದ ನಂತರ ಮಾತನಾಡಿದ ಬೈಡೆನ್ ಅವರು ಈ ಹೇಳಿಕೆ ನೀಡಿದ್ದಾರೆ.
ತಾಲಿಬಾನಿಗಳನ್ನು ಮಟ್ಟ ಹಾಕುವ ಕಾರ್ಯಕ್ಕೆ ನಾವೆಲ್ಲಾ ನಿಮ್ಮ ಜೊತೆಗಿರುತ್ತೇವೆ ಎಂದು ಯುರೋಪಿಯನ್ ಒಕ್ಕೂಟ, ನ್ಯಾಟೋ, ವಿಶ್ವಸಂಸ್ಥೆಗಳು ಭರವಸೆ ನೀಡಿವೆ ಎಂದು ಬೈಡೆನ್ ಸ್ಪಷ್ಟಪಡಿಸಿದ್ದಾರೆ. ಆಫ್ಘಾನ್‍ನಲ್ಲಿ ಮುಂದೆ ರಚನೆಯಾಗುವ ಸರ್ಕಾರ ತಾಲಿಬಾನಿಗಳ ತಾಳಕ್ಕೆ ಕುಣಿಯಲು ಆರಂಭಿಸಿದರೆ ಅಂತಹ ಸರ್ಕಾರದ ವಿರುದ್ಧ ನಾವು ಒಗ್ಗೂಡಿ ಹೋರಾಟ ನಡೆಸಲಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.
ತಾಲಿಬಾನಿಗಳ ಯಾವುದೆ ಮಾತಿಗೂ ನಾವು ಮನ್ನಣೆ ನೀಡುವುದಿಲ್ಲ. ನಾವು ಅವರ ಕ್ರಿಯೆಗಳ ಮೇಲೆ ಗಮನ ಹರಿಸಿ ಅಗತ್ಯ ಸಹಕಾರದಿಂದ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಬೈಡೆನ್ ವಿವರಣೆ ನೀಡಿದ್ದಾರೆ.