'25 ವರ್ಷಗಳ ಹಿಂದೆ ಸಚಿನ್ ಹೀಗೆ ಮಾಡಿದ್ದರು': ತ್ಯಾಗ ಮಾಡುವಂತೆ ಕೊಹ್ಲಿಗೆ ಶಾಸ್ತ್ರಿ ಸಲಹೆ

'25 ವರ್ಷಗಳ ಹಿಂದೆ ಸಚಿನ್ ಹೀಗೆ ಮಾಡಿದ್ದರು': ತ್ಯಾಗ ಮಾಡುವಂತೆ ಕೊಹ್ಲಿಗೆ ಶಾಸ್ತ್ರಿ ಸಲಹೆ

ಮುಂಬರುವ ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾದ ತಯಾರಿ ಆರಂಭವಾಗಿದೆ. ಈಗಾಗಲೇ ವರ್ಷದ ಮೊದಲ ಏಕದಿನ ಸರಣಿ ಗೆದ್ದಿರುವ ಭಾರತ, ಎರಡನೇ ಸರಣಿಯನ್ನೂ ಗೆಲ್ಲುವ ಹಂತದಲ್ಲಿದೆ. ಶ್ರೀಲಂಕಾ ವಿರುದ್ಧ ಸ್ವದೇಶದಲ್ಲಿ 3-0 ಅಂತರದ ಜಯ ಸಾಧಿಸಿದ ಭಾರತ, ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯ ಗೆದ್ದಿದೆ.

ವಿಶ್ವಕಪ್‌ನ ಹೊರತಾಗಿ, ಟೀಮ್ ಇಂಡಿಯಾವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿದೆ. ಭಾರತವು ಫೈನಲ್‌ಗೆ ಪ್ರವೇಶಿಸುವ ಸಾಧ್ಯತೆಗಳು ಮುಂಬರುವ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಅವಲಂಬಿಸಿದ್ದು, ಫೆಬ್ರವರಿಯಲ್ಲಿ ಈ ಪಂದ್ಯಗಳು ತವರಿನಲ್ಲೇ ನಡೆಯಲಿವೆ.

ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊಲನೇ ಏಕದಿನ ಪಂದ್ಯದ ವೇಳೆ ಇದೇ ವಿಷಯವನ್ನು ಚರ್ಚಿಸಿದ ಭಾರತ ತಂಡದ ಮಾಜಿ ಕೋಚ್ ಮತ್ತು ಕ್ರಿಕೆಟಿಗ ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಬಗ್ಗೆ ಆಸಕ್ತಿದಾಯಕ ಅಂಶವನ್ನು ಹಂಚಿಕೊಂಡರು. ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಟೆಸ್ಟ್ ಸರಣಿಗೆ ತಯಾರಾಗುವ ಹಿನ್ನೆಲೆಯಲ್ಲಿ, ಕಿವೀಸ್‌ ವಿರುದ್ಧದ ಅಂತಿಮ ಏಕದಿನ ಪಂದ್ಯದಿಂದ ಕೊಹ್ಲಿ ಹೊರಗುಳಿಯುವಂತೆ ಶಾಸ್ತ್ರಿ ಸಲಹೆ ನೀಡಿದ್ದಾರೆ. ವೀಕ್ಷಕ ವಿವರಣೆಕಾರ ಹರ್ಷಾ ಭೋಗ್ಲೆ ಅವರ ಪ್ರಶ್ನೆಗೆ ಉತ್ತರವಾಗಿ ಶಾಸ್ತ್ರಿ ಈ ಹೇಳಿಕೆ ನೀಡಿದ್ದಾರೆ.

"ನೀವು ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತೀರಿ ಎಂದು ನಾನು ಯಾವಾಗಲೂ ನಂಬುತ್ತೇನೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಟೆಸ್ಟ್‌ ಆಡಲಿರುವಾಗ. ಆಟದಲ್ಲಿ ನೀವು ಅಪಾಯವನ್ನು ತೆಗೆದುಕೊಳ್ಳಲು ಬಯಸದಿರಬಹುದು. ಆದರೆ, ಕೆಲವೊಮ್ಮೆ ಸ್ಮಾರ್ಟ್ ಆಗಿರಬೇಕು. ದೊಡ್ಡ ತಂಡಗಳ ವಿರುದ್ಧದ ಆಟಗಳಿಗಾಗಿ ಕೆಲ ತ್ಯಾಗ ಮಾಡಬೇಕು. ಆ ದೊಡ್ಡ ತಂಡವೇ ಆಸ್ಟ್ರೇಲಿಯಾ," ಎಂದು ಶಾಸ್ತ್ರಿ ವಿರಾಟ್‌ ಕೊಹ್ಲಿ ಕುರಿತು ಹೇಳಿದ್ದಾರೆ.

25 ವರ್ಷಗಳ ಹಿಂದೆ ಅದೇ ರೀತಿ ಮಾಡಿದ್ದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನೂ ಶಾಸ್ತ್ರಿ ಉಲ್ಲೇಖಿಸಿದ್ದಾರೆ. "25 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ತಂಡದ ವಿರುದ್ಧ ಸಿಸಿಐನಲ್ಲಿ ಆಡಲು ಹೋಗಿ ದ್ವಿಶತಕ ಗಳಿಸಿದ್ದರು. ಎರಡು ತಿಂಗಳ ನಂತರ 1998ರಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ಎಲ್ಲಾ ಸ್ವರೂಪಗಳಲ್ಲಿ 1000ಕ್ಕಿಂತ ಹೆಚ್ಚು ರನ್ ಗಳಿಸಿದರು. ಅವರು ಸೊಗಸಾದ ದ್ವಿಶತಕ ಸಿಡಿಸಿದರು," ಎಂದು ಶಾಸ್ತ್ರಿ ಹೇಳಿದರು.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯು ಫೆಬ್ರವರಿ 9ರಿಂದ ಪ್ರಾರಂಭವಾಗುತ್ತದೆ. ಮೊದಲ ಪಂದ್ಯವು ನಾಗ್ಪುರದಲ್ಲಿ ನಡೆಯಲಿದೆ. ಮುಂದೆ ನಡೆಯಲಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಹಿನ್ನೆಲೆಯಲ್ಲಿ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯು ಭಾರತದ ಪಾಲಿಗೆ ಮಹತ್ವದ್ದಾಗಿದೆ.

ಈಗಗಾಲೇ ಟಿ20 ಕ್ರಿಕೆಟ್‌ನಿಂದ ಕೊಹ್ಲಿಯನ್ನು ಭಾಹಶಃ ಹೊರಗಿಡಲಾಗಿದೆ. ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಆಯ್ಕೆ ಮಾಡಲಾಗುತ್ತಿದೆ. ಏಕದಿನದಲ್ಲಿ ಮೇಲಿಂದ ಮೇಲೆ ಶತಕ ಸಿಡಿಸುತ್ತಿರುವ ಕೊಹ್ಲಿ ತಮ್ಮ ಶ್ರೇಯಾಂಕವನ್ನು ಕೂಡಾ ಹೆಚ್ಚಿಸಿಕೊಂಡಿದ್ದಾರೆ. ಐಸಿಸಿ ಇತ್ತೀಚೆಗೆ ಬಿಡುಗಡೆ ಮಾಡಿದ ಏಕದಿನ ರ‍್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ಅಗ್ರ ಐದರಲ್ಲಿ ಪ್ರವೇಶಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಬಳಿಕ ಕೊಹ್ಲಿ ಏಕದಿಮ ಶ್ರೇಯಾಂಕದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸದ್ಯ ಪಾಕಿಸ್ತಾನ ನಾಯಕ ಬಾಬರ್ ಅಜಮ್ 887 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ವಾಂಡರ್ ಡಸ್ಸೆನ್ 766 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 759 ಅಂಕಗಳೊಂದಿಗೆ ಡಿ ಕಾಕ್ ಮೂರನೇ ಸ್ಥಾನದಲ್ಲಿದ್ದಾರೆ. ಮುಂದೆ ಟೆಸ್ಟ್‌ ಸರಣಿಯಲ್ಲಿ ಕೊಹ್ಲಿ ಆಡಲಿದ್ದು, ಅಲ್ಲಿಯೂ ಶ್ರೇಯಾಂಕ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ.