ಸೇನಾ ಏರ್‌ರ್ಪೋರ್ಟ್ ಕಾರ್ಯ ಸ್ಥಗಿತ ಸಾಧ್ಯತೆ; ಅಂಕೋಲಾದ ಕಥೆಯೇನು?

ಕಾರವಾರ, ಅಕ್ಟೋಬರ್ 05; ಭಾರತೀಯ ಸೇನೆಗಳ ಒಡೆತನದಲ್ಲಿದ್ದ ಮೂರು ವಿಮಾನ ನಿಲ್ದಾಣಗಳಾದ (ವಾಯುನೆಲೆ) ಶ್ರೀನಗರ, ಪುಣೆ ಮತ್ತು ಗೋವಾದಲ್ಲಿ ಡಿಸೆಂಬರ್ ನಂತರ ನಾಗರಿಕ ವಿಮಾನಯಾನ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂಬ ವರದಿಯೊಂದು ಬಂದಿದೆ.
ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ವಿಮಾನ ನಿಲ್ದಾಣದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಪುಣೆ ವಿಮಾನ ನಿಲ್ದಾಣವು ಭಾರತೀಯ ವಾಯುಪಡೆಯ ಲೋಹೆಗಾಂವ್ ವಾಯುನೆಲೆಯ ಒಂದು ಭಾಗವಾಗಿದ್ದು, ಗೋವಾದ ದಾಬೋಲಿಂ ವಿಮಾನ ನಿಲ್ದಾಣವು ಭಾರತೀಯ ನೌಕಾಪಡೆಯ ನೌಕಾ- ವಾಯುನೆಲೆಯಲ್ಲಿ 'ಐಎನ್‌ಎಸ್ ಹನ್ಸಾ' ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಶ್ರೀನಗರದ ಶೇಖ್ ಉಲ್ ಆಲಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತೀಯ ವಾಯುಪಡೆಯ ಒಡೆತನದ ಸೇನಾ ವಾಯುನೆಲೆಯಾಗಿದ್ದು, ಇಲ್ಲಿ ನಾಗರಿಕ ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಲು ಸೇನೆ ಚಿಂತನೆ ನಡೆಸಿದೆ.
ಇದಕ್ಕೆ ಇಂಬು ನೀಡುವಂತೆ, ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಮುಂದುವರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಪರವಾನಗಿ ಗಡುವು ಮುಗಿದು ವರ್ಷ ಸಮೀಪಿಸುತ್ತಿದ್ದರೂ ಅದನ್ನು ನವೀಕರಿಸಿಕೊಳ್ಳಲು ಈವರೆಗೆ ಯಾವುದೇ ಪ್ರಕ್ರಿಯೆಯನ್ನು ರಕ್ಷಣಾ ಇಲಾಖೆ ನಡೆಸಿಲ್ಲ.
2020ರ ಡಿಸೆಂಬರ್ ತಿಂಗಳಿನಲ್ಲೇ ಈ ವಿಮಾನ ನಿಲ್ದಾಣಗಳ ಡಿಜಿಸಿಎ ಪರವಾನಗಿ ಪೂರ್ಣಗೊಳಿಸುವ ಗಡುವು ಮುಗಿದಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಕಾರಣ ಅದನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲಾಗಿತ್ತು. ಡಿಜಿಸಿಎ ಮತ್ತು ವಾಯುಯಾನ ಸಚಿವಾಲಯವು ರಕ್ಷಣಾ ಸಚಿವಾಲಯಕ್ಕೆ ಈ ಬಗ್ಗೆ ಪತ್ರ ಬರೆದು, ನಾಗರಿಕ ವಿಮಾನಯಾನ ನಿಯಂತ್ರಕರಿಗೆ ಈ ವಿಮಾನ ನಿಲ್ದಾಣಗಳಿಗೆ ಪರವಾನಗಿ ಪಡೆಯಲು ಅನುಮತಿ ನೀಡಿ ಎಂದಿದೆ.
ಇಲ್ಲದಿದ್ದರೆ ಅಂತರರಾಷ್ಟ್ರೀಯ ವಿಮಾನಗಳು ಈ ನಗರಗಳಿಗೆ ಬರುವುದು ನಿಲ್ಲಲಿದೆ ಎಂದು ಸೂಚಿಸಿದೆ. ಆದರೆ, ಈ ವಿಮಾನ ನಿಲ್ದಾಣಗಳನ್ನು ನಾಗರಿಕ ವಿಮಾನಯಾನ ನಿಯಂತ್ರಕದಿಂದ ಪರವಾನಗಿ ಪಡೆಯುವ ಯಾವುದೇ ಕ್ರಮವನ್ನು ಸೇನೆ ಈ ಮೊದಲಿನಿಂದಲೂ ವಿರೋಧಿಸುತ್ತದೆ. ಯಾಕೆಂದರೆ, ತನ್ನ ಸೂಕ್ಷ್ಮ ಪ್ರದೇಶವಾಗಿರುವ ವಾಯುನೆಲೆಯೊಳಗೆ ನಾಗರಿಕರನ್ನು ಬಿಟ್ಟುಕೊಳ್ಳುವುದನ್ನು ಸೇನೆ ಬಯಸುವುದಿಲ್ಲ.
ಪರಿಣಾಮ ಹೇಗೆ?: ಉತ್ತರ ಕನ್ನಡ ಜಿಲ್ಲೆಯ ಸಾಕಷ್ಟು ಜನರು ವಿದೇಶಗಳಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಇನ್ನೂ ಕೆಲವರು ಅರಬ್ ರಾಷ್ಟ್ರಗಳಲ್ಲಿ ತಮ್ಮ ಕುಟುಂಬಗಳನ್ನೂ ಹೊಂದಿದ್ದಾರೆ. ಹೀಗಾಗಿ ಕರಾವಳಿಯ ಭಟ್ಕಳ, ಹೊನ್ನಾವರ ಭಾಗದ ಜನ ಮಂಗಳೂರು ವಿಮಾನ ನಿಲ್ದಾಣವನ್ನು ಆಶ್ರಯಿಸಿದ್ದಾರೆ.
ಕುಮಟಾ, ಅಂಕೋಲಾ, ಕಾರವಾರ ಭಾಗದವರು ಹೆಚ್ಚಿನದಾಗಿ ವಿದೇಶ ಪ್ರಯಾಣಕ್ಕೆ ಗೋವಾವನ್ನೇ ಅವಲಂಬಿಸಿದ್ದಾರೆ. ಒಂದು ವೇಳೆ ಗೋವಾದಲ್ಲಿನ ನೌಕಾಪಡೆಯ ಒಡತನದಲ್ಲಿರುವ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸ್ಥಗಿತಗೊಳಿಸಿದರೆ ಅದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ನೌಕಾಪಡೆಯ ಒಪ್ಪಂದೊಂದಿಗೆ ನಿರ್ಮಾಣಗೊಳ್ಳಲಿರುವ ವಿಮಾನ ನಿಲ್ದಾಣದ ಮೇಲೆ ಹೆಚ್ಚಿನ ಒತ್ತಡ ಬೀರಲಿದೆ.
ಮೊದಲನೆಯದಾಗಿ, ಸ್ಥಳೀಯರು ವಿರೋಧಿಸುತ್ತಿದ್ದರೂ ಅಂಕೋಲಾದಲ್ಲಿ ಉದ್ದೇಶಿತ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿ ಗೋವಾದಲ್ಲಿ ನಿಲ್ದಾಣವಿಲ್ಲವೆಂಬ ಕಾರಣಕ್ಕೆ ಇನ್ನಷ್ಟು ಚುರುಕುಗೊಳ್ಳಲಿದೆ. ಯಾಕೆಂದರೆ ಗೋವಾದ ನಿಲ್ದಾಣ ಕಾರ್ಯಾಚರಣೆ ಸ್ಥಗಿತಗೊಳಿಸಿದರೆ ಉತ್ತರ ಕನ್ನಡ ಜನತೆಯ ಜೊತೆಗೆ ಗೋವನ್ನರೂ ಅಂಕೋಲಾ ವಿಮಾನ ನಿಲ್ದಾಣವನ್ನೇ ಆಶ್ರಯಿಸಬೇಕಾಗುತ್ತದೆ. ಇದರಿಂದಾಗಿ ಜಿಲ್ಲೆಯ ಔದ್ಯೋಗಿಕರಣ, ಪ್ರವಾಸೋದ್ಯಮ ಕ್ಷೇತ್ರದ ಮೇಲೂ ಭಾರೀ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ.
ಇನ್ನು ಎರಡನೇಯ ಪರಿಣಾಮದ ಬಗ್ಗೆ ನೋಡುವುದಾದರೆ, ಈಗಾಗಲೇ ಮೂರು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದಕ್ಕೆ ಕಾರಣ ರಕ್ಷಣಾ ಇಲಾಖೆಯ ಸ್ವತ್ತು ಹಾಗೂ ಸೂಕ್ಷ್ಮ ವಲಯವೆಂದು.
ಇದೇ ಕಾರಣವನ್ನು ಬಳಸಿ ಮುಂದೆ ನೌಕಾಪಡೆ ಉದ್ದೇಶಿತ ಅಂಕೋಲಾ ನಿಲ್ದಾಣದಲ್ಲಿಯೂ ನಾಗರೀಕ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ. ಒಟ್ಟಾರೆಯಾಗಿ ವಿಮಾನ ನಿಲ್ದಾಣ ಆಗುವವರೆಗೆ ಹಾಗೂ ನಾಗರಿಕ ವಿಮಾನಗಳು ಕಾರ್ಯಾಚರಿಸುವವರೆಗೆ ಏನನ್ನೂ ಹೇಳಲಾಗದು ಎಂಬುದೂ ಇಲ್ಲಿ ಉಲ್ಲೇಖಾರ್ಹ.