ವಿರೋಧ ಪಕ್ಷದ ನಾಯಕರು ಒಗ್ಗೂಡಿದರೆ ದೇಶಕ್ಕೆ ಲಾಭ: ತೆಲಂಗಾಣದ ಬೃಹತ್ ರ‍್ಯಾಲಿಗೆ ನಿತೀಶ್ ಕುಮಾರ್ ಪ್ರತಿಕ್ರಿಯೆ

ವಿರೋಧ ಪಕ್ಷದ ನಾಯಕರು ಒಗ್ಗೂಡಿದರೆ ದೇಶಕ್ಕೆ ಲಾಭ: ತೆಲಂಗಾಣದ ಬೃಹತ್ ರ‍್ಯಾಲಿಗೆ ನಿತೀಶ್ ಕುಮಾರ್ ಪ್ರತಿಕ್ರಿಯೆ

ಪಾಟ್ನಾ: "ನಾನು ಹೇಳುತ್ತಲೇ ಇದ್ದೇನೆ. ನನಗಾಗಿ ಏನೂ ಬೇಡ. ವಿರೋಧ ಪಕ್ಷದ ನಾಯಕರು ಒಗ್ಗೂಡಿ ಮುನ್ನಡೆಯುವುದನ್ನು ನೋಡುವುದು. ನನಗಿರುವ ಒಂದೇ ಒಂದು ಕನಸಾಗಿದೆ. ಇದರಿಂದ ದೇಶಕ್ಕೆ ಪ್ರಯೋಜನವಿದೆ" ಎಂದು ತೆಲಂಗಾಣದಲ್ಲಿ ನಡೆದ ಪ್ರತಿಪಕ್ಷಗಳ ಬೃಹತ್ ರ‍್ಯಾಲಿ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ Nitish Kumar ಸುದ್ದಿಗಾರರಿಗೆ ತಿಳಿಸಿದರು.

ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಆಹ್ವಾನದ ಮೇರೆಗೆ ತೆಲಂಗಾಣದ ಖಮ್ಮಮ್‌ನಲ್ಲಿ ನಡೆದ ಜಂಟಿ ರ‍್ಯಾಲಿಯನ್ನು ಉದ್ದೇಶಿಸಿ ಪ್ರಮುಖ ಪ್ರತಿಪಕ್ಷ ನಾಯಕರು ಭಾಷಣ ಮಾಡಿದ ಒಂದು ದಿನದ ನಂತರ ಬಿಹಾರ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತೀಶ್ ಕುಮಾರ್, "ಕೆಸಿಆರ್ (ಚಂದ್ರಶೇಖರ್ ರಾವ್) ರ‍್ಯಾಲಿ ನಡೆಸುತ್ತಿರುವ ಬಗ್ಗೆ ನನಗೆ ತಿಳಿದಿರಲಿಲ್ಲ, ನಾನು ಬೇರೆ ಕೆಲಸದಲ್ಲಿ ನಿರತನಾಗಿದ್ದೆ, ಅವರ ಪಕ್ಷದ ರ‍್ಯಾಲಿಗೆ ಆಹ್ವಾನಿಸಿದವರು ಅಲ್ಲಿಗೆ ಹೋಗಿರಬೇಕು'' ಎಂದರು.

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಆಮ್ ಆದ್ಮಿ ಪಕ್ಷದ (ಎಎಪಿ) ಅರವಿಂದ ಕೇಜ್ರಿವಾಲ್ ಹಾಗೂ ಎಡಪಕ್ಷದ ನಾಯಕರಾದ ಪಿಣರಾಯಿ ವಿಜಯನ್ ಹಾಗೂ ಡಿ. ರಾಜಾ ಮುಂತಾದ ನಾಯಕರು ರ‍್ಯಾಲಿಯಲ್ಲಿ ಪಾಲ್ಗೊಂಡರು. ಸದ್ಯ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಕೊನೆಯ ಕೆಲವು ದಿನಗಳತ್ತ ಗಮನಹರಿಸಿರುವ ಕಾಂಗ್ರೆಸ್ ಕೂಡ ರ‍್ಯಾಲಿಯಲ್ಲಿ ಕಾಣಿಸಿಕೊಳ್ಳಲಿಲ್ಲ.

ಇದು 2024 ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸೇತರ ವಿರೋಧಿ ಒಕ್ಕೂಟದ ಮೊದಲ ಪ್ರಮುಖ ಹೆಜ್ಜೆಯಾಗಿ ಕಂಡುಬಂದಿದೆ.