ಸರ್ಕಾರದಿಂದ ಕೋಟ್ಯಂತರ ಡಾಲರ್ ಬಾಕಿ : ಪಾಕ್ಗೆ ವಿದೇಶಿ ನೌಕಾ ಸೇವೆ ಬಂದ್?
ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ವಿದೇಶಿ ರಾಷ್ಟ್ರಗಳ ನೌಕೆ ಸೇವೆ ರದ್ದಾಗುವ ದಿನಗಳು ಸಮೀಪಿಸುತ್ತಿವೆ. ವಿದೇಶಿ ಪಾವತಿ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಸರಕು ಸಾಗಣೆ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ವಿದೇಶಿ ನೌಕಾಯಾನ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಹಲವು ರಾಷ್ಟ್ರಗಳಿಗೆ ಪಾಕಿಸ್ತಾನ ಸರ್ಕಾರದಿಂದ ಕೋಟ್ಯಂತರ ಡಾಲರ್ ಮೊತ್ತದ ಶುಲ್ಕ ಪಾವತಿಯಾಗಿಲ್ಲ. ಹೀಗಾಗಿ, ಸೇವೆಯನ್ನು ಸ್ಥಗಿತಗೊಳಿಸದೆ ಬೇರೆ ದಾರಿ ಇಲ್ಲ ಎಂದು ಕಂಪನಿಗಳು ಶೆಹಭಾಜ್ ಷರೀಫ್ ನೇತೃತ್ವದ ಸರ್ಕಾರಕ್ಕೆ ಸೂಚ್ಯವಾಗಿ ತಿಳಿಸಿವೆ. ಒಂದು ವೇಳೆ, ನೌಕಾಯಾನ ಸ್ಥಗಿತಗೊಂಡರೆ ಅರ್ಥ ವ್ಯವಸ್ಥೆಗೆ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ಪಾಕಿಸ್ತಾನ ಹಡಗು ಏಜೆಂಟರ ಒಕ್ಕೂಟ ಹೇಳಿದೆ.
70 ಲಕ್ಷ ಜವಳಿ ಉದ್ಯೋಗಿಗಳು ವಜಾ !
ಆರ್ಥಿಕ ಸಂಕಷ್ಟ, ಆಹಾರದ ಕೊರತೆ ಜತೆಗೆ ನೈಸರ್ಗಿಕ ವೈಪರೀತ್ಯಗಳು ಪಾಕಿಸ್ತಾನವನ್ನು ಭಾದಿಸುತ್ತಿದ್ದು, ಬಿಕ್ಕಟ್ಟಿಗೆ ಸಿಲುಕಿರುವ ರಾಷ್ಟ್ರದ ಜವಳಿ ಕ್ಷೇತ್ರದ 70ಲಕ್ಷ ಕಾರ್ಮಿಕರಿಗೆ ಉದ್ಯೋಗ ಇಲ್ಲದಂತಾಗಿದೆ. ಕಳೆದ 30 ವರ್ಷದಲ್ಲೇ ಮೊದಲಬಾರಿಗೆ ಹತ್ತಿ ಉತ್ಪಾದನೆಯಲ್ಲಿ ಪಾಕ್ ಕಳೆದವರ್ಷ ಹಿಂದೆ ಬಿದ್ದಿತ್ತು. ಅದರಿಂದ ಜವಳಿ ಉದ್ಯಮ ಸಂಕಷ್ಟದಲ್ಲಿತ್ತು. ಈಗ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ವಿದೇಶಿ ಪಾವತಿ ಕೊರತೆಯಿಂದಾಗಿ ಪಾಕ್ನಿಂದ ರಫ್ತಾಗಬೇಕಿದ್ದ ಜವಳಿ ಉತ್ಪನ್ನಗಳು ಕರಾಚಿ ಬಂದರಿನಲ್ಲಿ ಸಿಲುಕುವಂತಾಗಿದೆ. ಪಾಕ್ನ ಸಾವಿರಾರು ಜವಳಿ ಮಳಿಗೆಗಳು ಈಗಾಗಲೇ ಮುಚ್ಚಿ ಹೋಗಿವೆ.