ನನಗೆ ಅಧಿಕಾರ ಬೇಕಿಲ್ಲ, ನಾನು ಜನರ ಸೇವೆ ಮಾಡಬೇಕಷ್ಟೇ: ಪ್ರಧಾನಿ ಮೋದಿ
ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಅಧಿಕಾರ ಬೇಕಿಲ್ಲ, ನಾನು ಜನರ ಸೇವೆ ಮಾಡಬೇಕು ಎಂದರು.
ಪತ್ರಿ ತಿಂಗಳಾಂತ್ಯದ ಭಾನುವಾರದಂದು ನಡೆಯುವ ಬಾನುಲಿ ರೆಡಿಯೋ ಕಾರ್ಯಕ್ರಮ ಮನ್ ಕೀ ಬಾತ್ 83ನೇ ಆವೃತ್ತಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿ, ಆಯುಷ್ಮಾನ್ ಭಾರತ್ ಯೋಜನೆಯು ಬಡವರಿಗೆ ತುಂಬಾ ನೆರವು ನೀಡಿದೆ ಎಂದು ಹೇಳಿದರು.
ತಮ್ಮ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಭಾರತದ ಸ್ಟಾರ್ಟ್ಅಪ್, ಪ್ರಕೃತಿಯನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಿದರು. ಕೋವಿಡ್ -19 ಸಾಂಕ್ರಾಮಿಕ ರೋಗವು ಇನ್ನೂ ಮುಗಿದಿಲ್ಲ ಮತ್ತು ಜನರು ಜಾಗರೂಕರಾಗಿರಬೇಕು ಎಂದು ಹೇಳುವ ಮೂಲಕ ಅವರು ಕೊನೆಗೊಳಿಸಿದರು.
ಸ್ಟಾರ್ಟ್ಅಪ್ ಸಂಸ್ಕೃತಿಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ನಾವು ಭಾರತದ ಬೆಳವಣಿಗೆಯ ಒಂದು ಮಹತ್ವದ ಘಟ್ಟದಲ್ಲಿದ್ದೇವೆ. ಯುವಕರು ಉದ್ಯೋಗಾಕಾಂಕ್ಷಿಗಳು ಮಾತ್ರವಲ್ಲದೆ, ಉದ್ಯೋಗ ಸೃಷ್ಟಿಕರ್ತರೂ ಆಗಿದ್ದಾರೆ. ಭಾರತದಲ್ಲಿ 70 ಕ್ಕೂ ಹೆಚ್ಚು ಯುನಿಕಾರ್ನ್ಗಳಿವೆ. ಯುನಿಕಾರ್ನ್ ಖಾಸಗಿಯಾಗಿ ನಡೆಸಲ್ಪಡುವ ಆರಂಭಿಕ ಕಂಪನಿಯಾಗಿದ್ದು 1 ಶತಕೋಟಿ ಡಾಲರ್ಗೂ ಹೆಚ್ಚು ಮೌಲ್ಯವನ್ನು ಹೊಂದಿದೆ ಎಂದರು. ಆಲೋಚನೆ, ಆವಿಷ್ಕಾರ ಮತ್ತು ಯಾವುದನ್ನು ಕೂಡ ಮಾಡುತ್ತೇನೆಂಬ ಉತ್ಸಾಹ ಮತ್ತು ಸಾಮರ್ಥ್ಯ ಎಂಬ ಮೂರು ರೀತಿಯ ವ್ಯಕ್ತಿತ್ವವು ದೇಶದ ಯುವಕರಲ್ಲಿ ಇದೆ ಎಂದು ತಿಳಿಸಿದರು.
ಇನ್ನು ಎರಡು ದಿನಗಳಲ್ಲಿ ಡಿಸೆಂಬರ್ ತಿಂಗಳು ಬರಲಿದೆ. ಈ ತಿಂಗಳಲ್ಲಿ ನೌಕಾಪಡೆ ಹಾಗೂ ಸಶಸ್ತ್ರ ಪಡೆಗಳ ಧ್ವಜ ದಿನ ಆಚರಿಸಲಾಗುತ್ತದೆ. ಅಲ್ಲದೆ, ಡಿಸೆಂಬರ್ 16 ರಂದು ದೇಶವು 1971ರ ಯುದ್ಧದ ಸುವರ್ಣ ಮಹೋತ್ಸವ ವರ್ಷವನ್ನು ಆಚರಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ನಾನು ನಮ್ಮ ಸಶಸ್ತ್ರ ಪಡೆಗಳನ್ನು ಸ್ಮರಿಸಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.