ಚಿಂಚನಸೂರ ಕಾಂಗ್ರೆಸ್ ಸೇರ್ಪಡೆ; ಮಾಲಕರೆಡ್ಡಿ ಎತ್ತ
ಯಾದಗಿರಿ: ಕೋಲಿ ಸಮಾಜದ ಪ್ರಭಾವಿ ಮುಖಂಡ ಬಾಬುರಾವ ಚಿಂಚನಸೂರ 'ಕಮಲ' ಬಿಟ್ಟು 'ಕೈ' ಸೇರಿದ್ದು, ಬಿಜೆಪಿಯಲ್ಲಿರುವ ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿ ನಡೆ ಎನು ಎನ್ನುವುದು ಕುತೂಹಲಕಾರಿಯಾಗಿದೆ.
ಕಳೆದ ಲೋಕಸಭೆ ಚುನಾವಣೆ ವೇಳೆ ಕಲಬುರಗಿ ಕ್ಷೇತ್ರದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಮಾಲಕರೆಡ್ಡಿ ಬಿಜೆಪಿ ಸೇರಿದ್ದರು.
ಈಗ ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್ ಕುರಿತು ಒಲವು ತೋರಿಸಿದ್ದ ಬಗ್ಗೆ ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ಕಾರ್ಯಕರ್ತನೊಂದಿಗೆ ಮಾತನಾಡಿದ್ದ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಆಡಿಯೊದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಕುರಿತು ಅವಹೇನಕಾರಿಯಾಗಿ ಮಾತನಾಡಿದ್ದರು.
ಇದರಿಂದ ಬಿಜೆಪಿ ಶಾಸಕರ ಅಣ್ಣ, ಮಾಜಿ ಶಾಸಕ ವೀರಬಸವಂತರೆಡ್ಡಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿಯಿಂದ ಮಾಲಕರೆಡ್ಡಿ ಅವರನ್ನು ಉಚ್ಚಾಟಿಸುವಂತೆ ಆಗ್ರಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರಾದಿಯಾಗಿ ಹಲವು ಮುಖಂಡರು ಮಾಲಕರೆಡ್ಡಿ ನಡೆ ಖಂಡಿಸಿದ್ದರು.
ಕಾಂಗ್ರೆಸ್ ನಲ್ಲಿ ಹಿರಿಯರಿಗೆ ಗೌರವ ಸಿಗುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಸೇರಿದ್ದ ಮಾಲಕರೆಡ್ಡಿ ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಯಾವ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿಲ್ಲ. ವಿಜಯಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಯಾದಗಿರಿಗೆ ಆಗಮಿಸಿದ್ದರೂ ಸಮಾವೇಶದಲ್ಲಿ ಭಾಗವಹಿಸಿರಲಿಲ್ಲ. ಇದರಿಂದ ಬಿಜೆಪಿ ಪಕ್ಷದಿಂದ ಅಂತರ ಕಾದುಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿವೆ.
ಈಗ ಬಾಬುರಾವ ಚಿಂಚನಸೂರ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು, ಮಾಲಕರೆಡ್ಡಿ ಮತ್ತೆ ಕಾಂಗ್ರೆಸ್ ಸೇರುತ್ತಾರಾ ಎನ್ನುವ ಚರ್ಚೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು
ಕಳೆದ ವರ್ಷ ಭೇಟಿಯಾಗಿರುವುದು ಕ್ಷೇತ್ರದಲ್ಲಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು.
ಖರ್ಗೆ ಅಡ್ಡಗಾಲು:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಮಾಲಕರಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಿದ್ದವಾಗಿದ್ದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಲಕರೆಡ್ಡಿ ಕಾಂಗ್ರೆಸ್ ಸೇರ್ಪಡೆಗೆ ಅಡ್ಡಗಾಲು ಹಾಕಿದ್ದಾರೆ ಎನ್ನಲಾಗುತ್ತಿದೆ. ಬಾಬುರಾವ ಚಿಂಚನಸೂರ, ಎ.ಬಿ.ಮಾಲಕರೆಡ್ಡಿ ಅವರು ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಬಗ್ಗೆ ಬೇಸರಗೊಂಡು ಬಿಜೆಪಿ ಸೇರ್ಪಡೆಯಾಗಿದ್ದರು. ಬಾಬುರಾವ ಚಿಂಚನಸೂರ ಎಂಎಲ್ಸಿ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮಾಲಕರೆಡ್ಡಿ ಕೂಡ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ಜನತೆ ಮಾತಾಡಿಕೊಳ್ಳುತ್ತಿದ್ದಾರೆ.
ಪುತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ:
ಸಚಿವ ಮಾಲಕರೆಡ್ಡಿ ಬಿಜೆಪಿಯಲ್ಲಿದ್ದು, ಅವರ ಪುತ್ರಿ ಡಾ.ಅನುರಾಗ ಮಾಲಕರೆಡ್ಡಿ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಕಾರ್ಯಕರ್ತರಿಗೆ ಗೊಂದಲ ಉಂಟಾಗಿದೆ.
ಕಾಂಗ್ರೆಸ್ ನಿಂದ ಐದು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿದ್ದ ಮಾಲಕರೆಡ್ಡಿ ತಮ್ಮ ಪುತ್ರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದರೆ ಪಕ್ಷ ಸೇರ್ಪಡೆ ಮಾತನಾಡಿದ್ದಾರೆ ಎನ್ನಲಾಗಿದೆ.