ವಿಶ್ವಗುರು ಅಂಕಣ | ರಾಹುಲ್ ಮೊದಲು ಕ್ಷಮೆ ಕೇಳಲಿ; ಆಮೇಲೆ ಮತ ಕೇಳಲಿ!

ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಮಸ್ಯೆಗಳು ತುಂಬಾ ಇದ್ದವು ಎಂಬುದು ನಿಜ. ಆದರೆ ನೆಹರೂ ಪ್ರಧಾನಿಯಾಗಿದ್ದಿದ್ದು ಬರೋಬ್ಬರಿ ಹದಿನೇಳು ವರ್ಷ. ನಿಜವಾಗಿಯೂ ಈ ನಾಡಿನ ಕುರಿತಂತೆ ಅವರಿಗೆ ಅಖಂಡವಾದ ಪ್ರೀತಿ-ಭಕ್ತಿಗಳಿದ್ದಿದ್ದರೆ ಸಮರ್ಥವಾದ ಪಥವೊಂದನ್ನು ನಿರ್ವಿುಸಿಹೋಗಬಹುದಿತ್ತು.
ಚಂದ್ರಶೇಖರ್ ಆಜಾದರ ಅಣ್ಣನ ಮಗ ಸುಜಿತ್ ಆಜಾದ್ 2016ರ ಫೆಬ್ರವರಿಯಲ್ಲಿ ಒಂದು ಭಯಾನಕವಾದ ಸತ್ಯವನ್ನು ಬಿಚ್ಚಿಟ್ಟಿದ್ದರು. ಚಂದ್ರಶೇಖರ್ ಆಜಾದರು ಅಲಹಾಬಾದಿನ ಆಲ್ಫ್ರೆಡ್ ರ್ಪಾನಲ್ಲಿ ಬ್ರಿಟೀಷರೊಂದಿಗೆ ಕಾದಾಡುತ್ತಾ ಕೊನೆಯುಸಿರೆಳೆದರಲ್ಲ, ಅಂದು ಆ ರ್ಪಾನಲ್ಲಿ ಆಜಾದರು ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನು ಬ್ರಿಟೀಷರಿಗೆ ಕೊಟ್ಟಿದ್ದು ಸ್ವತಃ ಜವಾಹರ್ಲಾಲ್ ನೆಹರೂ ಎಂದಿದ್ದರು! ಅಷ್ಟೇ ಅಲ್ಲ, ಭಗತ್ ಸಿಂಗ್ ಬಿಡುಗಡೆಗೆ ಹಿಂದೂಸ್ತಾನ್ ಸೋಷಿಯಲಿಸ್ಟಿಕ್ ರಿಪಬ್ಲಿಕ್ ಆರ್ವಿು ಸಂಗ್ರಹಿಸಿದ್ದ ನಿಧಿಯನ್ನೂ ಆಜಾದರು ಅವರ ಕೈಗಿತ್ತು ಬಂದಿದ್ದರು ಎಂದೂ ಸುಜಿತ್ ಹೇಳಿದರು. ಅಚ್ಚರಿ ಎಂದರೆ ಯಾವ ಪ್ರಮುಖ ಮಾಧ್ಯಮಗಳೂ ಅವರ ಈ ಆರೋಪವನ್ನು ಪ್ರಕಟಿಸುವ ಗೋಜಿಗೇ ಹೋಗಲಿಲ್ಲ.
ಈ ಆರೋಪದ ಜಾಡುಹಿಡಿದು ಹೊರಟ ಡೈಲ್ಯೊ ಎಂಬ ಮಾಧ್ಯಮ ಸಂಸ್ಥೆ ಅನೇಕ ಮಾಹಿತಿ ಕಲೆಹಾಕಿತು. ಕಾಂಗ್ರೆಸ್ಸಿಗರು ಬ್ರಿಟೀಷರಿಂದ ಪಡೆಯುತ್ತಿದ್ದ ಗೌರವ, ಅವರಿಗೆ ಇವರು ಕೊಡುತ್ತಿದ್ದ ಗುಪ್ತ ಮಾಹಿತಿಗಳು ಇವೆಲ್ಲದರ ಕುರಿತಂತೆ ವಿಸ್ತಾರವಾದ ಲೇಖನವನ್ನೇ ಪ್ರಕಟಿಸಿತು. ಅದರ ಪ್ರಕಾರ 1931ರಲ್ಲಿ ಗಾಂಧಿ-ಇರ್ವಿನ್ ಒಪ್ಪಂದದ ಸಂದರ್ಭದಲ್ಲಿ ಚಂದ್ರಶೇಖರ್ ಆಜಾದ್ ಜವಾಹರ್ಲಾಲ್ ನೆಹರೂರನ್ನು ಭೇಟಿಮಾಡಿದ್ದು ಸತ್ಯ ಮತ್ತು ಅದನ್ನು ನೆಹರೂ ಅವರೇ ಒಪ್ಪಿಕೊಂಡಿದ್ದಾರೆ. ಈ ಭೇಟಿಯ ವೇಳೆಗೆ ಭಗತ್ ಸಿಂಗ್ರನ್ನು ಬಿಡಿಸುವುದರ ಕುರಿತಂತೆ ನೆಹರೂ ಗಾಂಧಿಯವರನ್ನು ಮುಂದಿಟ್ಟುಕೊಂಡು ಅಸಹಾಯಕತೆ ವ್ಯಕ್ತಪಡಿಸಿದರಂತೆ. ಮುಖ ಕೆಂಪಗೆ ಮಾಡಿಕೊಂಡು ಹೊರಬಂದ ಆಜಾದ್ ನೇರ ಆಲ್ಫ್ರೆಡ್ ರ್ಪಾಗೆ ಹೋದರು. ಅವರ ಬೆನ್ನ ಹಿಂದೆಯೇ 80 ಜನ ಬ್ರಿಟೀಷ್ ಪೊಲೀಸರ ಪಡೆ ಅವರನ್ನು ಸುತ್ತುವರಿಯಿತು. ಕೊನೆಯ ಕ್ಷಣದವರೆಗೂ ಕಾದಾಡುತ್ತಾ ಆಜಾದರು ಆತ್ಮಾರ್ಪಣೆ ಮಾಡಿಕೊಳ್ಳುವಂತಹ ಸ್ಥಿತಿ ಬಂತು. ಆರೋಪ ಬಂದ ಮೇಲೆ ಎಂದಿಗೂ ಈ ಕುರಿತಂತೆ ಚರ್ಚೆಯೂ ಆಗಲಿಲ್ಲ, ವಿಸ್ತಾರವಾದ ತನಿಖೆಯೂ ನಡೆಯಲಿಲ್ಲ.
ಹಾಗಂತ ನೆಹರೂ ಮಾಡಿದ್ದು ಇದೊಂದೇ ಅಲ್ಲ. ಸುಭಾಷ್ಚಂದ್ರ ಬೋಸರ ಸೋದರ ಮೊಮ್ಮಗ ಚಂದ್ರಕುಮಾರ್ ಬೋಸ್ ಟ್ವೀಟ್ನಲ್ಲಿ, 'ನೆಹರೂ ಬ್ರಿಟೀಷರ ದಾಸನಾಗಿ ದೇಶಕ್ಕೆ ದ್ರೋಹ ಬಗೆದವರು. ಅವರ ತಾಳಕ್ಕೆ ಕುಣಿದೇ ಈ ದೇಶವನ್ನು ವಿಭಜಿಸಿದರು. ಹಾಗೆ ನೋಡಿದರೆ, ಹಿಟ್ಲರ್ ಅವರಿಗಿಂತ ಹೆಚ್ಚು ರಾಷ್ಟ್ರೀಯವಾದಿ. ಏಕೆಂದರೆ ಆತ ಯುರೋಪನ್ನು ಗೆಲ್ಲಬೇಕು ಎನ್ನುವ ದೃಷ್ಟಿಯಿಂದ ಎಲ್ಲವನ್ನೂ ಮಾಡಿದ. ನೆಹರೂವಿನಂತೆ ಎಂದೂ ತನ್ನ ದೇಶಕ್ಕೆ ದ್ರೋಹ ಬಗೆಯಲಿಲ್ಲ' ಎಂದಿದ್ದರು. ನೆಹರೂ ಮೇಲ್ನೋಟಕ್ಕೆ ನೇತಾಜಿಯ ಮಿತ್ರನಂತೆ ವರ್ತಿಸುತ್ತಾ ಆಂತರ್ಯದಲ್ಲಿ ಅವರ ವಿರುದ್ಧ ಬೆಂಕಿ ಕಾರುತ್ತಿದ್ದರು. ಸ್ವಾತಂತ್ರಾಯನಂತರವೂ ಸುಭಾಷ್ಚಂದ್ರ ಬೋಸರ ಕುಟುಂಬದ ಹಿಂದೆ ಗೂಢಚಾರರನ್ನಿಟ್ಟು ಅವರನ್ನು ಸುಮಾರು 20 ವರ್ಷಗಳ ಕಾಲ ಹಿಂಬಾಲಿಸುತ್ತಿದ್ದರು. ಆಜಾದ್ ಹಿಂದ್ ಸೇನೆಯ ವೀರರನ್ನು ಬ್ರಿಟೀಷರು ದೇಶದ್ರೋಹಿಗಳೆಂದು ಅವಮಾನಿಸಿದ್ದರಲ್ಲ, ಸ್ವಾತಂತ್ರಾಯನಂತರ ಪಾಕಿಸ್ತಾನ ಅವರನ್ನು ತನ್ನ ಸೇನೆಗೆ ಸೇರಿಸಿಕೊಂಡರೆ ನೆಹರೂ ಭಾರತದಲ್ಲೇ ಉಳಿದ ಈ ಸೇನಾ ನಾಯಕರನ್ನು ಸೇನೆಗೆ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಬ್ರಿಟೀಷರಿಗೆ ದ್ರೋಹ ಬಗೆದವರನ್ನು ನಾವು ಹೇಗೆ ಸೈನ್ಯಕ್ಕೆ ಸೇರಿಸಿಕೊಳ್ಳೋದು ಎಂಬ ಆತಂಕವಿದ್ದಿರಬಹುದು. ಈ ಎಲ್ಲ ಕಾರಣಗಳಿಗಾಗಿಯೇ ಸುಜಿತ್ ಆಜಾದ್, ನೆಹರೂಗೆ ಕೊಟ್ಟ ಭಾರತರತ್ನವನ್ನು ಮರಳಿ ಪಡೆಯಲು ಆಗ್ರಹಿಸಿದ್ದರು.
ಇವಿಷ್ಟನ್ನೂ ಈಗ ಏಕೆ ಹೇಳಬೇಕಾಯ್ತೆಂದರೆ, ತಮ್ಮನ್ನು ತಾವು ಸ್ವಾತಂತ್ರ್ಯಕ್ಕಾಗಿ ಕಾದಾಡಿದ ಪಕ್ಷ ಎಂದು ಪದೇಪದೆ ಹೇಳಿಕೊಳ್ಳುವ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದನ್ನು ನೋಡುವಾಗ ಅಸಹ್ಯವೆನಿಸುತ್ತದೆ. ಆನಂತರ ಈ ರೀತಿಯ ದ್ರೋಹ ಚಿಂತನೆ ಈ ಪಕ್ಷಕ್ಕೆ, ಪರಿವಾರಕ್ಕೆ ಹೊಸತೇನಲ್ಲ ಎಂದು ಅರಿವಾದಾಗ ಸ್ವಲ್ಪ ಸಮಾಧಾನವೂ ಆಗುತ್ತದೆ. ನೆಹರೂ ಈ ದೇಶಕ್ಕೆ ಮಾಡಿದ ದ್ರೋಹ ಒಂದೆರಡಲ್ಲ. ನಾವೆಲ್ಲರೂ ಈಗಲೂ ಅದರದ್ದೇ ಸಾಲವನ್ನು ತೀರಿಸುತ್ತಿದ್ದೇವೆ. ಸ್ವಾತಂತ್ರಾಯನಂತರ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ. ಆರಂಭಿಕ ಹಿನ್ನಡೆಯನ್ನು ಮೀರಿ ಭಾರತೀಯ ಸೈನಿಕರು ಪಾಕಿಸ್ತಾನವನ್ನು ಬಡಿಯುವ ಹಂತದಲ್ಲಿರುವಾಗಲೇ, ಯುದ್ಧದ ನಟ್ಟನಡುವೆ ಏಕಾಏಕಿ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ನಮ್ಮ ಜಗಳವನ್ನು ಬಗೆಹರಿಸಿಕೊಡಿ ಎಂದು ಕೇಳಿಕೊಂಡಿದ್ದರ ಲಾಜಿಕ್ಕನ್ನು ವಿವರಿಸಬಲ್ಲ ಸಾಮರ್ಥ್ಯವಿರುವುದು ಬಹುಶಃ ರಾಹುಲ್ಗೆ ಮಾತ್ರ. ಅದೂ ಪಕ್ಕದಲ್ಲಿ ಜೈರಾಮ್ ರಮೇಶ್ ಕುಳಿತಿದ್ದರೆ!
ನಮ್ಮ ಮತ್ತು ಪಾಕಿಸ್ತಾನದ ನಡುವೆ ವಿಶ್ವಸಂಸ್ಥೆ ಎಂದು ಕದನ ವಿರಾಮವನ್ನು ಘೊಷಿಸಿತೋ ಅಂದು ಶುರುವಾದ ಕಾಶ್ಮೀರ ಸಮಸ್ಯೆಯನ್ನು ಸರಿಮಾಡಿ ಇಡಿಯ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಏಕರಸಗೊಳಿಸಲು ನರೇಂದ್ರ ಮೋದಿಯೇ ಬರಬೇಕಾಯ್ತು. ತಮ್ಮ ಮುತ್ತಾತ ಮಾಡಿದ ತಪ್ಪನ್ನು ರಾಹುಲ್-ಪ್ರಿಯಾಂಕರು ತಿದ್ದಿದ್ದು ಹೇಗೆ ಗೊತ್ತೇ? ಮೋದಿ ಸರಿಮಾಡಿದ ಕಾಶ್ಮೀರದಲ್ಲಿ ಸುತ್ತಾಡಿ, ಜಗತ್ತಿನ ವೇದಿಕೆಯ ಮೇಲೆ ಅದೇ ಮೋದಿಯನ್ನು ಬೈಯ್ಯುವುದರ ಮೂಲಕ!
ಸ್ವಾತಂತ್ರ್ಯಾನಂತರ ನೆಹರೂ ಚೀನಾ ನೀತಿ ಹೇಗಿತ್ತು ಹೇಳಿ? ಅಮೆರಿಕಾ ಮತ್ತು ರಷ್ಯಾಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾವನ್ನು ತೆಗೆದು ಭಾರತವನ್ನು ಕೂರಿಸುವ ಕೊಡುಗೆ ಕೊಟ್ಟಾಗ ನೆಹರೂ ಅದನ್ನು ತಿರಸ್ಕರಿಸಿದರು. ಆ ಸ್ಥಾನದಲ್ಲಿ ಕೂರಬೇಕೆಂಬ ನಮ್ಮ ಇಚ್ಛೆಯನ್ನು ಈಡೇರಿಸಿಕೊಳ್ಳಲು ಇಂದಿಗೂ ಬಡಿದಾಡುತ್ತಿದ್ದೇವೆ. ನೆಹರೂ ಕಾಮ್ರೇಡ್ಪ್ರೇಮ ಅಸಾಧ್ಯವಾದ್ದೇ ಸರಿ. ಭಾರತದ ಇತಿಹಾಸವನ್ನು ತಿರುಚಿ ಬರೆದು ಅದನ್ನು ಅಡಗೂಲಜ್ಜಿಯ ಕಥೆಯಂತೆ ಮಾಡಿಟ್ಟಿರುವುದರಲ್ಲಿ ನೆಹರೂ ಪಾತ್ರ ಬಲುದೊಡ್ಡದ್ದು. ಈ ಕಾಮ್ರೇಡ್ಗಳು ಉದ್ದಕ್ಕೂ ಭಾರತಕ್ಕಿಂತ ಚೀನಾವನ್ನೇ ಹೆಚ್ಚು ಬೆಂಬಲಿಸಿ ಚೀನಾದ ಅಧ್ಯಕ್ಷ ನಮ್ಮ ಅಧ್ಯಕ್ಷ ಎಂದು ಹೇಳುತ್ತಿದ್ದುದನ್ನು ನಾವೆಂದಿಗೂ ಮರೆಯುವುದು ಸಾಧ್ಯವಿಲ್ಲ. ನೆಹರೂ ಇವರನ್ನು ನೆಚ್ಚಿಕೊಂಡೇ ಚೀನಾವು ಟಿಬೆಟನ್ನು ಆಕ್ರಮಿಸಿದಾಗ ತುಟಿ-ಪಿಟಿಕ್ ಎನ್ನಲಿಲ್ಲ.
ಪ್ರವಾಸವೊಂದರ ನಂತರ ಲಂಡನ್ನಿನಿಂದ ಬಂದೊಡನೆ ಪಟೇಲರಿಗೆ ಪತ್ರಬರೆದು, 'ಕಮ್ಯುನಿಸ್ಟ್ ನಾಯಕರ ಮೇಲೆ ನೀವು ಕೈಗೊಳ್ಳುತ್ತಿರುವ ಕಠಿಣ ಕ್ರಮದಿಂದ ಲೇಡಿ ಮೌಂಟ್ಬ್ಯಾಟನ್ ಕೂಡ ಬೇಸರಿಸಿಕೊಂಡಿದ್ದಾರೆ' ಎಂದಿದ್ದರು. 'ಜೆನೆಸಿಸ್ ಆಂಡ್ ಗ್ರೋತ್ ಆಫ್ ನೆಹರೂಯಿಸಂ' ಎಂಬ ಕೃತಿಯಲ್ಲಿ ಸೀತಾರಾಂ ಗೋಯಲ್ರು ಇವೆಲ್ಲವುಗಳ ಬಗ್ಗೆ ವಿಸ್ತಾರವಾಗಿ ರ್ಚಚಿಸಿದ್ದಾರೆ. ನೆಹರೂ ಕಾಮ್ರೇಡ್ಪ್ರೇಮದ ಎಲ್ಲ ಮದ ಇಳಿದಿದ್ದು ಸ್ವತಃ ಚೀನಾ ಆಕ್ರಮಣ ಮಾಡಿ ಭಾರತಕ್ಕೊಂದು ಅವಮಾನಕರ ಸೋಲನ್ನು ಕೊಟ್ಟಾಗಲೇ! ನೆಹರೂ ಮಾಡಿದ ಈ ತಪ್ಪುಗಳನ್ನು ಆಕಸ್ಮಿಕವೆಂದು ಪಕ್ಕಕ್ಕಿಡುವಂತಿಲ್ಲ. ಎಲ್ಲವೂ ಗೊತ್ತಿದ್ದೂ, ಭಾರತಕ್ಕೆ ತಾನಿಡುವ ಹೆಜ್ಜೆಯಿಂದ ಬಲುದೊಡ್ಡ ನಷ್ಟವಾಗುತ್ತದೆ ಎಂಬ ಅರಿವಿದ್ದಾಗ್ಯೂ ಅವರು ಇದನ್ನು ಮಾಡಿದ್ದಾರೆ. ಅಚ್ಚರಿ ಎಂದರೆ ಬಲೂಚಿಸ್ತಾನದ ರಾಜನಾಗಿದ್ದ ಖಾನ್ ಆಫ್ ಖಲತ್, ಮೀರ್ ಅಹ್ಮದಿಯಾ ಖಾನ್ ಪಾಕಿಸ್ತಾನವನ್ನು ಬಿಟ್ಟು ಭಾರತದೊಂದಿಗೆ ಸೇರಿಕೊಳ್ಳುತ್ತೇನೆ ಎಂದಾಗ ಈ ಮನುಷ್ಯ ಬೇಡವೆಂದರಲ್ಲ. ಯುದ್ಧದ ದೃಷ್ಟಿಯಿಂದ ಬಲೂಚಿಸ್ತಾನದ ಅಗತ್ಯ ಗೊತ್ತಿರುವ ಯಾರೂ ಈ ಅವಕಾಶವನ್ನು ತಿರಸ್ಕರಿಸುವುದು ಸಾಧ್ಯವೇ ಇರಲಿಲ್ಲ. ನೇಪಾಳದ ರಾಜ ವಿಕ್ರಂ ಷಾ ನೇಪಾಳವನ್ನು ಭಾರತದ ಅಂಗವಾಗಿಸುವ ಅವಕಾಶ ನೀಡಿದಾಗ್ಯೂ ನೆಹರೂ ತಿರಸ್ಕರಿಸಿಬಿಟ್ಟರು. ನೇಪಾಳ ಆನಂತರ ಸ್ವತಂತ್ರ ರಾಷ್ಟ್ರವಾಯ್ತು ಮತ್ತು ಈಗಂತೂ ನಮ್ಮ ಪಕ್ಕದಲ್ಲೇ ಇರುವ ಚೀನಾದ ವಸಾಹತಾಗಿಬಿಟ್ಟಿತು. ಇವೆಲ್ಲವನ್ನೂ ದೇಶದ್ರೋಹವಲ್ಲ ಎನ್ನುವಿರೇನು?
ಹೊರಗಿನ ಸಂಗತಿಗಳನ್ನು ಬಿಡಿ. ಜಾಗತಿಕ ಮಟ್ಟದ ಶಾಂತಿದೂತನೆಂಬ ಬಿರುದನ್ನು ಸಂಪಾದಿಸಲು ಈ ಪುಣ್ಯಾತ್ಮ ಗೋವಾದ ಸ್ವಾತಂತ್ರ್ಯಕ್ಕೂ ಕೈಜೋಡಿಸಿರಲಿಲ್ಲ. ಬಹುತೇಕರಿಗೆ ಗೊತ್ತಿಲ್ಲದ ಸಂಗತಿ ಏನೆಂದರೆ ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಉರುಳಿದರೂ ಗೋವಾ ಇನ್ನೂ ಪೋರ್ಚುಗೀಸರ ಕೈಯ್ಯಲ್ಲೇ ಇತ್ತು. ಹೈದರಾಬಾದ್-ಜುನಾಘಡಗಳನ್ನು ತೆಕ್ಕೆಗೆ ತೆಗೆದುಕೊಂಡಂತೆ ಗೋವಾವನ್ನು ಬುಟ್ಟಿಗೆ ಹಾಕಿಕೊಳ್ಳುವುದು ಕಷ್ಟವಿರಲಿಲ್ಲ. ಆದರೆ ವಿದೇಶಿಗರ ಕೈಲಿರುವ ಈ ಗೋವೆಯನ್ನು ಬಿಡಿಸಿಕೊಳ್ಳಲು ಸೇನೆಯನ್ನು ಕಳಿಸಿದರೆ ಜಾಗತಿಕ ಮಟ್ಟದಲ್ಲಿ ತನ್ನ ಕಾಂತಿ ಇಂಗಬಹುದೆಂಬ ಹೆದರಿಕೆ ನೆಹರುಗಿತ್ತು. ದೇಶದೆಲ್ಲೆಡೆಯಿಂದ ಸತ್ಯಾಗ್ರಹಿಗಳು ಹೋಗಿ ಗೋವೆಯ ವಿಮೋಚನೆಗೆ ಪ್ರಯತ್ನಿಸುತ್ತಿರುವಾಗ ಪೋರ್ಚುಗೀಸರ ಗುಂಡಿನ ದಾಳಿಗೆ ಕೆಲವರು ಮೃತಪಟ್ಟರು. ನೆಹರೂ ಈ ಸತ್ಯಾಗ್ರಹಿಗಳಿಗೆ ಸಹಕಾರ ಕೊಡುವುದಿರಲಿ, ಯಾವ ಕಾರಣಕ್ಕೂ ಸೈನ್ಯವನ್ನು ಕಳಿಸುವುದಿಲ್ಲ ಎಂಬ ಹೇಳಿಕೆ ಕೊಟ್ಟರು! ಜಗತ್ತಿನ ಯಾರೂ ಭಾರತ ಸರ್ಕಾರದಿಂದ ಸೇನೆ ಗೋವೆಗೆ ನುಗ್ಗುವುದು ಎಂಬ ಭಯದಲ್ಲಿ ಇರಬೇಕಾಗಿಲ್ಲ, ಏಕೆಂದರೆ ಅಕ್ಕಪಕ್ಕದಲ್ಲೆಲ್ಲೂ ಸೇನೆಯೇ ಇಲ್ಲ ಎಂದು ಜಗತ್ತಿನ ಜನಕ್ಕೆ ಭರವಸೆ ಕೊಡುತ್ತಿದ್ದರು.
ಪ್ರಜಾಪ್ರಭುತ್ವವನ್ನು ಜಗತ್ತಿನ ಮುಂದೆ ಉಳಿಸುವ ಪರಿಯಿದು! ರಾಜ್ವೋಹನ್ ಗಾಂಧಿ 'ಪಟೇಲ್' ಎಂಬ ಪುಸ್ತಕದಲ್ಲಿ, 1950ರಲ್ಲಿ ಗೋವಾದ ಘಟನೆಗಳ ಚರ್ಚೆ ನಡೆಯುವಾಗ ಪಟೇಲರು, ಸೇನೆ ನುಗ್ಗಿಸಿ ಗೋವೆಯನ್ನು ಸ್ವತಂತ್ರಗೊಳಿಸಲು ಎರಡು ಗಂಟೆ ಸಾಕು ಎಂದಿದ್ದನ್ನು ದಾಖಲಿಸಿದ್ದಾರೆ. ನೆಹರೂ ಅದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ ಅಷ್ಟೇ! ಭಾರತದ ಸತ್ಯಾಗ್ರಹಿಗಳು ಗೋವೆಯನ್ನು ಪ್ರವೇಶಿಸದಂತೆ ನಿಷೇಧ ಹೇರಿದ ಭೂಪ ಅವರು. ಇದನ್ನು ದೇಶಪ್ರೇಮ ಎನ್ನುವಿರೇನು?
ಇನ್ನು ನೆಹರೂ ಮುಸ್ಲಿಂಪ್ರೇಮವಂತೂ ರ್ಚಚಿಸಿದಷ್ಟೂ ಅಸಹ್ಯ ಹುಟ್ಟಿಸುವಂಥದ್ದು. ಅವರು ಭಾರತದೊಂದಿಗೆ ಏಕರಸವಾಗುವ ಎಲ್ಲ ಅವಕಾಶಗಳನ್ನೂ ಹಾಳುಮಾಡಿದ್ದು ನೆಹರೂ. ಅವರೊಳಗೆ ಪ್ರತ್ಯೇಕತೆಯ ಭಾವನೆಯನ್ನು ಬಲವಾಗಿ ಹುಟ್ಟುಹಾಕಿ ಅವರೆಂದಿಗೂ ಹಿಂದೂಗಳೊಂದಿಗೆ ಪ್ರೀತಿಯಿಂದ ಇರಲಾರದ ವ್ಯವಸ್ಥೆಯನ್ನು ಭಿನ್ನ-ಭಿನ್ನ ಸ್ವರೂಪದಲ್ಲಿ ಮಾಡಿದರು. ದಿನ ಬೆಳಗಾದರೆ ಹಿಂದೂ-ಮುಸ್ಲಿಂ ಕದನಗಳನ್ನು ನೋಡುತ್ತೇವಲ್ಲ, ಸರ್ ತನ್ಸೆ ಜುದಾ ಘೊಷಣೆಗಳು ಮುಗಿಲೆತ್ತರಕ್ಕೆ ಮೊಳಗುತ್ತವಲ್ಲ, ನೀವು ನೆನಪಿಸಿಕೊಳ್ಳಬೇಕಾಗಿರುವುದು ಜವಾಹರ್ಲಾಲ್ ನೆಹರೂರನ್ನು.
ಒಪ್ಪಿಕೊಳ್ಳುತ್ತೇನೆ, ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಮಸ್ಯೆಗಳು ತುಂಬಾ ಇದ್ದವು. ಆದರೆ ನೆಹರೂ ಪ್ರಧಾನಿಯಾಗಿದ್ದಿದ್ದು ಐದಾರು ವರ್ಷವೋ, ಎಂಟ್ಹತ್ತು ವರ್ಷವೋ ಅಲ್ಲ. ಬರೋಬ್ಬರಿ ಹದಿನೇಳು ವರ್ಷ! ನಿಜವಾಗಿಯೂ ಈ ನಾಡಿನ ಕುರಿತಂತೆ ಅವರಿಗೆ ಅಖಂಡವಾದ ಪ್ರೀತಿ-ಭಕ್ತಿಗಳಿದ್ದಿದ್ದರೆ ಈ ವೇಳೆಗೆ ಅವರು ಸಮರ್ಥವಾದ ಪಥವೊಂದನ್ನು ನಿರ್ವಿುಸಿಹೋಗಬಹುದಿತ್ತು. ಅವರಿಗೆ ಪರಿವಾರವನ್ನು ಬಲಗೊಳಿಸಬೇಕಾಗಿತ್ತು. ಅವರ ಸಂಬಂಧಿಗಳೇ ರಾಯಭಾರಿಗಳು, ಅವರ ಮುಂದಿನ ಪೀಳಿಗೆಯೇ ಭಾರತದ ಅಧಿಪತಿಗಳು, ಕೊನೆಗೆ ಅವರು ತೀರಿಕೊಂಡ ಮೇಲೂ ಭಿನ್ನ-ಭಿನ್ನ ಯೋಜನೆಗಳಿಗೆ ಹೆಸರು ಇರಿಸಿಕೊಳ್ಳುವ ಮೂಲಕ ಶಾಶ್ವತವಾಗಿರುವಂತಹ ಆಲೋಚನೆಗಳು.
ಅವರದ್ದೇ ಮುಂದಿನ ಪೀಳಿಗೆ ರಾಹುಲ್. ನೆಹರೂ ಹಾಕಿಕೊಟ್ಟ ಮಾರ್ಗದಲ್ಲೇ ಹೆಜ್ಜೆ ಇಡುತ್ತಿರುವ ರಾಹುಲ್ರಿಂದ ನಾವು ಮತ್ತೇನನ್ನು ನಿರೀಕ್ಷಿಸಬಹುದು ಹೇಳಿ? ಕೇಂಬ್ರಿಜ್ ವೇದಿಕೆಯ ಮೇಲೆನಿಂತು ಭಾರತವನ್ನು ದೂರುವ, ಹಳಿಯುವ ಅವರು ಇಂಗ್ಲೆಂಡಿನ ಎಂಪಿಗಳೊಂದಿಗೆ ಚರ್ಚೆಗೆ ಕೂತು ಪ್ರಜಾಪ್ರಭುತ್ವದ ರಕ್ಷಣೆಗೆ ನೀವು ಬನ್ನಿ ಎಂದು ಕರೆಯುತ್ತಾರೆ. ಮೀರ್ ಜಾಫರ್ ಸಿರಜ್-ಉದ್-ದೌಲನ ವಿರುದ್ಧ ರಾಬರ್ಟ್ ಕ್ಲೈವ್ನನ್ನು ಹೀಗೇ ಆಹ್ವಾನಿಸಿದ್ದ. ಮಲ್ಲಪ್ಪ ಶೆಟ್ಟಿ ವೆಂಕಟರಾಯರು ಚೆನ್ನಮ್ಮನ ವಿರುದ್ಧ ಬ್ರಿಟೀಷರಿಗೆ ಹೀಗೇ ಸಹಕಾರ ಕೊಟ್ಟಿದ್ದರು. ನಮ್ಮ ಇತಿಹಾಸದುದ್ದಕ್ಕೂ ಇಂಥವರನೇಕರು ಕಂಡು ಬರುತ್ತಾರೆ. ನನಗೆ ಬೇಸರವಿರೋದು ಹಾಗೆ ಕಂಡುಬರುವ ಒಬ್ಬಿಬ್ಬ ವ್ಯಕ್ತಿಗಳ ಮೇಲಲ್ಲ. ಅವರ ಬೆಂಬಲಕ್ಕೆ ನಿಲ್ಲುವ ಲಕ್ಷಾಂತರ ಮಂದಿಯ ಮೇಲೆ! ನಮ್ಮ ಮೊದಲ ಗುರಿ ದೇಶವೇ ಹೊರತು ಪರಿವಾರವಲ್ಲ, ವ್ಯಕ್ತಿಯೂ ಅಲ್ಲ. ಅನೇಕ ವ್ಯಕ್ತಿಗಳು ಬಂದು ಹೋಗಿದ್ದಾರೆ. ಅನೇಕ ಪರಿವಾರಗಳು ರಾಷ್ಟ್ರಯಜ್ಞದಲ್ಲಿ ಹವಿಸ್ಸಾಗಿ ಅರ್ಪಣೆಗೊಂಡಿವೆ. ಉಳಿಯಬೇಕಾದ್ದು ಭಾರತ ಮಾತ್ರ. ನಾನು, ನೀವು ಉಳಿದರೆಷ್ಟು, ಅಳಿದರೆಷ್ಟು!
ಮನೆ ಬಾಗಿಲಿಗೆ ಕಾಂಗ್ರೆಸ್ಸಿಗರು ಬರುತ್ತಾರಲ್ಲ, ನನ್ನ ಭಾರತವನ್ನು ರಾಹುಲ್ ಇಂಗ್ಲೆಂಡಿನಲ್ಲಿ ಹಳಿದದ್ದು ಏಕೆ? ಎಂದು ಕೇಳಿ. ಅವರು ಈ ವಿಚಾರಕ್ಕೆ ಕ್ಷಮೆ ಕೇಳುವವರೆಗೂ ನೀವು ಮತ ಕೇಳಲು ಬರಬೇಡಿ ಎಂದೊಮ್ಮೆ ಹೇಳಿನೋಡಿ. ಈ ರಾಷ್ಟ್ರದ ತಾಕತ್ತು ಪರಿವಾರಕ್ಕಿಂತಲೂ ದೊಡ್ದದ್ದು ಎಂದು ತೋರಿಸುವ ಸಂದರ್ಭ ಇದು.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)