ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ; 'ಮೋದಿ ಉಪನಾಮ ಹೇಳಿಕೆ' ಕುರಿತು ಪಾಟ್ನಾ ಕೋರ್ಟ್ ಸಮನ್ಸ್
ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರು ತಮ್ಮ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ಏಪ್ರಿಲ್ 12 ರಂದು ಹೇಳಿಕೆ ದಾಖಲಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪಾಟ್ನಾ ಸಂಸದ-ಶಾಸಕ ನ್ಯಾಯಾಲಯ ಸಮನ್ಸ್ ನೀಡಿದೆ.
ಈ ಪ್ರಕರಣವು ಕರ್ನಾಟಕದಲ್ಲಿ 2019 ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿಯವರ 'ಎಲ್ಲಾ ಕಳ್ಳರು ಮೋದಿ' ಹೇಳಿಕೆಗೆ ಸಂಬಂಧಿಸಿದೆ.
ಮಾರ್ಚ್ 23 ರಂದು ರಾಹುಲ್ ಗಾಂಧಿ ಅವರ ಮೋದಿ ಉಪನಾಮದ ಹೇಳಿಕೆಗಾಗಿ 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಬಿಜೆಪಿ ಶಾಸಕ ಹಾಗೂ ಗುಜರಾತ್ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ದೂರು ದಾಖಲಿಸಿದ್ದು, ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನ್ಯಾಯಾಲಯದ ಶಿಕ್ಷೆಯ ಒಂದು ದಿನದ ನಂತರ, ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ಅವರು ಕೇರಳದ ವಯನಾಡ್ ಕ್ಷೇತ್ರದ ಸಂಸದರಾಗಿದ್ದರು. ಇದೀಗ ರಾಹುಲ್ ಗಾಂಧಿಗೆ ಪಾಟ್ನಾ ಕೋರ್ಟ್ ಸಮನ್ಸ್ ನೀಡಿದೆ.