ಸ್ನೇಹಿತನ ಜೊತೆ ನಿಗೂಢವಾಗಿ ಸಾವನ್ನಪ್ಪಿದ ಮಾಜಿ ಕೇಂದ್ರ ಸಚಿವರ ಅಣ್ಣನ ಮಗ
ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಅಣ್ಣನ ಮಗ 26 ವರ್ಷದ ಮಹೇಶ್ ಅಹಿರ್ ತನ್ನ ಸ್ನೇಹಿತ 27 ವರ್ಷದ ಹರೀಶ್ ಧೋತೆ ಎಂಬಾತನ ಜೊತೆ ಚಂಡಿಘಡದ ಕಾಡಿನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ಮೂಲತಃ ಮಹಾರಾಷ್ಟ್ರದ ಚಂದ್ರಪುರದವರಾದ ಇವರಿಬ್ಬರು ಮಾರ್ಚ್ 14ರಂದು ಮಧ್ಯಪ್ರದೇಶದ ಉಜ್ಜೈನಿಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದರು ಎನ್ನಲಾಗಿದೆ.
ಚಂಡಿಘಡದ ಬಳಿಯ ಕಾಡಿನಲ್ಲಿ ಇಬ್ಬರು ಯುವಕರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳದಲ್ಲಿ ದೊರೆತ ದಾಖಲೆ ಪತ್ರಗಳ ಆಧಾರದ ಮೇಲೆ ಇವರುಗಳ ಗುರುತು ಪತ್ತೆಯಾಗಿತ್ತು. ಸ್ಥಳದಲ್ಲಿ ಮದ್ಯದ ಬಾಟಲಿ ಸಹ ಸಿಕ್ಕಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂಬ ಶಂಕೆಯೂ ವ್ಯಕ್ತವಾಗಿದೆ.
ಕುಟುಂಬ ಸದಸ್ಯರಿಗೆ ಈಗ ಮಾಹಿತಿ ನೀಡಲಾಗಿದ್ದು, ಅವರು ಬಂದ ಬಳಿಕ ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ