ಬಲೂನ್" ಎಳದಾಡಿದರೆ ಪರಿಣಾಮ ನೆಟ್ಟಗಿರಲ್ಲ-ಚೀನಾ ಎಚ್ಚರಿಕೆ

ಬೀಜಿಂಗ್: ಅಮೆರಿಕವು ಇದೇ 4ರಂದು ಹೊಡೆದು ಉರುಳಿಸಿದ ಚೀನಾದ ಬಲೂನ್ ವಿಷಯವನ್ನು ಇನ್ನಷ್ಟು ಎಳೆದಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಚೀನಾವು ಅಮೆರಿಕಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದೆ.
ಮ್ಯೂನಿಕ್ ಭದ್ರತಾ ಸಮಾವೇಶದಲ್ಲಿ ಚೀನಾದ ಹಿರಿಯ ರಾಜತಾಂತ್ರಿಕ ವಾಂಗ್ ಯಿ ಅವರೊಂದಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್ ಮಾತುಕತೆ ನಡೆಸಿದ ಬಳಿಕ ಚೀನಾದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಹೇಳಿಕೆ ಹೊರಡಿಸಿದೆ.
'ಬಲೂನ್ ವಿಷಯವನ್ನು ಅಮೆರಿಕವು ಇನ್ನಷ್ಟು ಎಳೆದಾಡಲು ಪ್ರಯತ್ನಿಸಿದರೆ ಅದರಿಂದ ಎದುರಾಗುವ ದುಷ್ಪರಿಣಾಮವನ್ನು ಅಮೆರಿಕ ಎದುರಿಸಬೇಕಾಗುತ್ತದೆ. ಅಮೆರಿಕವು ಈ ವಿಷಯವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಾರದು' ಎಂದು ಹೇಳಿಕೆ ತಿಳಿಸಿದೆ.
ವಾಷಿಂಗ್ಟನ್ ವರದಿ: ಮ್ಯೂನಿಕ್ ಸಮಾವೇಶದ ಹಿನ್ನೆಲೆಯಲ್ಲಿ ವಾಂಗ್ ಯಿ ಅವರೊಂದಿಗೆ ಮಾತುಕತೆ ನಡೆಸಿದ ವೇಳೆ ಬ್ಲಿಂಕನ್ ಅವರು ಉಕ್ರೇನ್ ವಿಷಯದಲ್ಲಿ ಚೀನಾವು ರಷ್ಯಾಕ್ಕೆ ಬೆಂಬಲ ನೀಡುತ್ತಿರುವ ವಿಷಯ ಪ್ರಸ್ತಾಪವಾಯಿತು, ಜತೆಗೆ ಬಲೂನ್ ಹಾರಾಟದಿಂದಾಗಿ ಅಮೆರಿಕದ ಸಾರ್ವಭೌಮತೆಗೆ ಧಕ್ಕೆಯಾಗಿರುವ ವಿಷಯವನ್ನೂ ಎತ್ತಿ ಹೇಳಿದರು. ರಷ್ಯಾಕ್ಕೆ ಯುದ್ಧ ಸಾಮಗ್ರಿಗಳನ್ನು ಪೂರೈಸಿದ್ದೇ ಆದರೆ ಅಮೆರಿಕವು ಚೀನಾದ ಮೇಲೆ ನಿರ್ಬಂಧ ಹೇರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಬ್ಲಿಂಕನ್ ನೀಡಿದರು ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.
'ಅಮೆರಿಕದ ವಾಯುಪ್ರದೇಶದಲ್ಲಿ ಚೀನಾದ ಬೇಹುಗಾರಿಕಾ ಬಲೂನ್ ಹಾರಾಟ ನಡೆಸಿದ್ದನ್ನು ಖಂಡಿತ ಒಪ್ಪಿಕೊಳ್ಳಲಾಗದು. ಇದು ಅಮೆರಿಕದ ಸಾರ್ವಭೌಮತೆಯ ಉಲ್ಲಂಘನೆಯಾಗಿದೆ. ಇಂತಹ ದುಸ್ಸಾಹಸ ಮತ್ತೆ ಮರುಕಳಿಸಬಾರದು ಎಂಬ ಸ್ಪಷ್ಟ ಎಚ್ಚರಿಕೆಯನ್ನು ಬ್ಲಿಂಕನ್ ಅವರು ವಾಂಗ್ ಅವರಿಗೆ ನೀಡಿದರು' ಎಂದು ಅವರು ತಿಳಿಸಿದರು.