ಉ.ಪ್ರದೇಶ ಚುನಾವಣೆ; ರಾಮ ಮಂದಿರ ನಿರ್ಮಾಣ ಬಿಜೆಪಿಗೆ ಸಹಕಾರಿಯೇ?

ಲಕ್ನೋ, ಡಿಸೆಂಬರ್ 08;  ಅಯೋಧ್ಯೆಯಲ್ಲಿ ನಿರ್ಮಾಣ ಮಾಡುವುದು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ? 2022ರ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.

ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಉತ್ತರ ಪ್ರದೇಶದ ಜನರ ಬಳಿ ಈ ವಿಚಾರ ಮುಂದಿಟ್ಟುಕೊಂಡು ಮಾತುಕತೆ ನಡೆಸಿವೆ. ರಾಮ ಮಂದಿರ ವಿಚಾರದಲ್ಲಿ ಜನರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿವೆ.

ರಾಮ ಮಂದಿರ ವಿಚಾರ 2022ರ ಚುನಾವಣೆಯಲ್ಲಿ ಹೇಗೆ ಪ್ರಭಾವ ಬೀರಲಿದೆ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ರೈತರ ಪ್ರತಿಭಟನೆ, ನಿರುದ್ಯೋಗ, ಮಹಿಳೆಯರ ಸುರಕ್ಷತೆ ಚುನಾವಣೆಯಲ್ಲಿನ ಇತರ ವಿಚಾರಗಳಾಗಿವೆ. 2019ರಲ್ಲಿ ಅಯೋಧ್ಯೆ ವಿವಾದದ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಈಗ ನಡೆಯಲಿರುವ ಚುನಾವಣೆಯಲ್ಲಿ ಇದು ಪ್ರಮುಖ ವಿಚಾರವೂ ಆಗಿದೆ.

ಬಾಬ್ರಿ ಮಸೀದಿ ಧ್ವಂಸ ಮಾಡಿ 29 ವರ್ಷಗಳು ಕಳೆದಿವೆ. ಇಂತಹ ಸಂದರ್ಭದಲ್ಲಿ ಎಬಿಪಿ ನ್ಯೂಸ್- ಸಿ-ವೋಟರ್ 2064 ಜನರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಣೆ ಮಾಡಿದೆ. ಅದರ ವರದಿಯನ್ನು ಬಿಡುಗಡೆ ಮಾಡಿವೆ.

ಬಿಜೆಪಿ ಬೆಂಬಲಿಗರು, ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್‌ಪಿ ಸೇರಿದಂತೆ ಇತರ ಪಕ್ಷಗಳ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಣೆ ಮಾಡಲಾಗಿದೆ.

ಸಮೀಕ್ಷೆಯ ವರದಿ ಪ್ರಶ್ನೆ 1; ರಾಮ ಮಂದಿರ ನಿರ್ಮಾಣ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಸಹಕಾರಿಯಾಗಲಿದೆಯೇ?

ಒಟ್ಟು ಶೇ 58ರಷ್ಟು ಜನರು ರಾಮ ಮಂದಿರ ನಿರ್ಮಾಣ ಬಿಜೆಪಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ. 41.4ರಷ್ಟು ಜನರು ಇದರಿಂದ ಪಕ್ಷಕ್ಕೆ ಪ್ರಯೋಜನವಿಲ್ಲ ಎಂದು ಅಭಿಪ್ರಾಯಟ್ಟಿದ್ದಾರೆ.

ಶೇ 79.2 ಬಿಜೆಪಿ ಬೆಂಬಲಿಗರು, ಶೇ 51.9 ಕಾಂಗ್ರೆಸ್ ಬೆಂಬಲಿಗರು, ಶೇ 31ರಷ್ಟು ಸಮಾಜವಾದಿ ಪಕ್ಷದ ಬೆಂಬಲಿಗರು, ಶೇ 35ರಷ್ಟು ಬಿಎಸ್‌ಪಿ ಬೆಂಬಲಿಗರು ರಾಮ ಮಂದಿರ ನಿರ್ಮಾಣ ಬಿಜೆಪಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

ಪ್ರಶ್ನೆ 2 ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಮ ಮಂದಿರಕ್ಕೆ ಎಷ್ಟು ಕ್ರೆಡಿಟ್ ಕೊಡಬೇಕು? ಎಂದು ಜನರನ್ನು ಪ್ರಶ್ನಿಸಲಾಗಿದೆ. ಶೇ 50.6ರಷ್ಟು ಜನರು ಇದಕ್ಕೆ ಉತ್ತರ ನೀಡಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸಂಪೂರ್ಣ ಕ್ರೆಡಿಟ್ ರಾಮಮಂದಿರಕ್ಕೆ ಕೊಡಬೇಕು ಎಂದು ಹೇಳಿದ್ದಾರೆ.

ಶೇ 28ರಷ್ಟು ಬಿಜೆಪಿ ಗೆದ್ದರೆ ರಾಮಮಂದಿರಕ್ಕೆ ಕ್ರೆಡಿಟ್ ಕೊಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ 21.4ರಷ್ಟು ಜನರು ಈ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಶೇ 59.3ರಷ್ಟು ಬಿಜೆಪಿ ಬೆಂಬಲಿಗರು, ಶೇ 43.2ರಷ್ಟು ಕಾಂಗ್ರೆಸ್‌ ಬೆಂಬಲಿಗರು, ಶೇ 34.2 ಸಮಾಜವಾದಿ ಪಕ್ಷದ ಬೆಂಬಲಿಗರು, ಶೇ 46.7ರಷ್ಟು ಬಿಎಸ್‌ಪಿ ಬೆಂಬಲಿಗರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿದ್ದು, ಈಗ ಕಾಮಗಾರಿ ನಡೆಯುತ್ತಿದೆ. ಆಗಸ್ಟ್‌ ತಿಂಗಳಿನಲ್ಲಿ ಶಂಕುಸ್ಥಾಪನೆ ಮಾಡಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ "ಭಾರತ ಇಂದು, ಭಗವಾನ್ ಭಾಸ್ಕರನ ಸಾನಿಧ್ಯದಲ್ಲಿ ಸರಯು ನದಿ ತೀರದಲ್ಲಿ ಸುವರ್ಣ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿದೆ" ಎಂದು ಹೇಳಿದ್ದರು.

"ಭಾರತದ ಉದ್ದಗಲಕ್ಕೂ, ಕನ್ಯಾಕುಮಾರಿಯಿಂದ ಕ್ಷೀರ್ ಭವಾನಿವರೆಗೆ, ಕೋಟೇಶ್ವರದಿಂದ ಕಾಮಾಕ್ಯದವರೆಗೆ, ಜಗನ್ನಾಥದಿಂದ ಕೇದಾರನಾಥದವರೆಗೆ, ಸೋಮನಾಥದಿಂದ ಕಾಶಿ ವಿಶ್ವನಾಥದವರೆಗೆ, ಸಮೇದ ಶಿಖರದಿಂದ ಶ್ರವಣಬೆಳಗೊಳದವರೆಗೆ, ಬೋಧಗಯಾದಿಂದ ಸಾರಾನಾಥದವರೆಗೆ, ಅಮೃತಸರದಿಂದ ಪಾಟ್ನಾ ಸಾಹೀಬ್ ವರೆಗೆ, ಅಂಡಮಾನ್ ನಿಂದ ಅಜ್ಮೀರ್ ವರೆಗೆ, ಲಕ್ಷದ್ವೀಪದಿಂದ ಲೇಹ್ ವರೆಗೆ ಇಡೀ ದೇಶ ರಾಮಮಯವಾಗಿದೆ" ಎಂದು ತಿಳಿಸಿದ್ದರು.

ಇಡೀ ದೇಶ ಇಂದು ಭಾವಪರವಶಕ್ಕೆ ಒಳಗಾಗಿದೆ ಮತ್ತು ಪ್ರತಿಯೊಂದು ಹೃದಯವೂ ಪ್ರಕಾಶಿಸುತ್ತಿದೆ. ಇಡೀ ದೇಶ ಭಾವನಾತ್ಮಕತೆಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಇದು ಇತಿಹಾಸದ ಭಾಗವಾಗಲಿದೆ ಮತ್ತು ಈ ಐತಿಹಾಸಿಕ ಕ್ಷಣಕ್ಕಾಗಿ ಸಾಕಷ್ಟು ದೀರ್ಘಕಾಲದಿಂದ ಕಾಯುತ್ತಿದ್ದೆವು. ಶತಮಾನಗಳಿಂದ ಕಾಯುವಿಕೆ ದಿನ ಇಂದು ಮುಕ್ತಾಯವಾಗಿದೆ. ಕೋಟ್ಯಂತರ ಭಾರತೀಯರು ತಮ್ಮ ಜೀವಮಾನದ ಅವಧಿಯಲ್ಲಿ ಇಂತಹ ಚರಿತ್ರಾರ್ಹ ಸಂದರ್ಭದ ಭಾಗವಾಗುತ್ತೇವೆ ಎಂದು ನಂಬಿರಲಿಲ್ಲವೆಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದರು.