ʻಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆʼ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
ನವದೆಹಲಿ: ಪ್ರಸ್ತುತ ಜಾಗತಿಕ ಪರಿಸ್ಥಿತಿ ಮತ್ತು ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯನ್ನು ಪರಿಗಣಿಸಿ, ಇತರ ದೇಶಗಳಿಗೆ ಹೋಲಿಸಿದರೆ ಪೆಟ್ರೋಲ್ ಬೆಲೆ ಬಹುಶಃ ಭಾರತದಲ್ಲಿ ಅತ್ಯಂತ ಕಡಿಮೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಗುರುವಾರ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಗ್ಗಿಸಲು ವ್ಯಾಟ್ ಅನ್ನು ಕಡಿಮೆ ಮಾಡಿದ್ದರೆ, ಕೆಲವು ವಿರೋಧ ಪಕ್ಷದ ಆಡಳಿತದ ರಾಜ್ಯಗಳು ಹಾಗೆ ಮಾಡಲಿಲ್ಲ. ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಜಾರ್ಖಂಡ್ ರಾಜ್ಯಗಳು ತಮ್ಮ ತೆರಿಗೆಯನ್ನು ಕಡಿತಗೊಳಿಸಿಲ್ಲ. ಕೇಂದ್ರ ಸರ್ಕಾರವು ಪಂಪ್‌ನಲ್ಲಿನ ಬೆಲೆಯನ್ನು ಸಮಂಜಸವಾದ ಮಟ್ಟದಲ್ಲಿ ನಿರ್ವಹಿಸುವ ಸಲುವಾಗಿ, ನವೆಂಬರ್ 2021 ಮತ್ತು ಮೇ 2022 ರಲ್ಲಿ ಎರಡು ಸಂದರ್ಭಗಳಲ್ಲಿ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ ಎಂದು ಅವರು ಹೇಳಿದರು.
ಪೆಟ್ರೋಲ್ ಬೆಲೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಅವುಗಳು ಶೇಕಡಾವಾರು ಪ್ರಮಾಣದಲ್ಲಿ ಏರಿಕೆಯಾಗಿದೆ. ಅದು ಕೆಲವೊಮ್ಮೆ ಶೇಕಡಾ 40 ರಷ್ಟು ಅಥವಾ ಶೇಕಡಾ 50 ರಷ್ಟು ಹೆಚ್ಚಾಗಿದೆ. ಭಾರತದಲ್ಲಿ 2021 ಮತ್ತು 2022 ರ ನಡುವಿನ ಅವಧಿಯಲ್ಲಿ ಪೆಟ್ರೋಲ್ ಬೆಲೆಗಳು ಕೇವಲ ಶೇಕಡಾ 2 ರಷ್ಟು ಹೆಚ್ಚಾಗಿದೆ ಎಂದರು.
ಇಂದು ಭಾರತದಲ್ಲಿ ಪೆಟ್ರೋಲ್ ಬೆಲೆಯು ಬಹುಶಃ ಅತ್ಯಂತ ಕಡಿಮೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಸರಾಸರಿ ಬೆಲೆ ಶೇಕಡಾ 102 ರಷ್ಟು ಹೆಚ್ಚಾಗಿದೆ. ಇದು ನವೆಂಬರ್ 2020 ಮತ್ತು ನವೆಂಬರ್ 2022 ರ ನಡುವೆ $ 43.34 ರಿಂದ $ 87.55 ಕ್ಕೆ ಏರಿದೆ ಎಂದು ಮಾಹಿತಿ ನೀಡಿದರು.