ವೋಟರ್ ಐಡಿ ಹಗರಣದಲ್ಲಿ ಸಚಿವ ಅಶ್ವತ್ಥ್ ನಾರಾಯಣ ವಿಚಾರಣೆ ಮಾಡುವ ದಮ್ಮು, ತಾಕತ್ತು ಇಲ್ಲವೇ ಸಿಎಂ ಬೊಮ್ಮಾಯಿ ಅವರೇ ? ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು : ವೋಟರ್ ಐಡಿ ಪ್ರಕರಣ ಸಂಬಂಧ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಚಿಲುಮೆ ಸಂಸ್ಥೆಯಲ್ಲಿ ಲೆಟರ್ ಹೆಡ್, ಚೆಕ್ ದೊರಕಿದ ವಿಚಾರವಾಗಿ ಸಚಿವ ಅಶ್ವತ್ಥ್ ನಾರಾಯಣ ಅವರ ವಿಚಾರಣೆ ಮಾಡುವ ದಮ್ಮು, ತಾಕತ್ತು ಇಲ್ಲವೇ ಸಿಎಂ ಬೊಮ್ಮಾಯಿ ಅವರೇ ?ಎಂದು ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಚಿಲುಮೆ ಸಂಸ್ಥೆಯಲ್ಲಿ ಲೆಟರ್ ಹೆಡ್, ಚೆಕ್ ದೊರಕಿದ ವಿಚಾರವಾಗಿ ಸಚಿವ ಅಶ್ವತ್ಥ್ ನಾರಾಯಣ ಅವರ ವಿಚಾರಣೆ ಮಾಡುವ ದಮ್ಮು, ತಾಕತ್ತು ಇಲ್ಲವೇ ಬಸವರಾಜ ಬೊಮ್ಮಾಯಿ ಅವರೇ? ಸಚಿವರಿಗೂ ಚಿಲುಮೆಗೂ ಏನು ಸಂಬಂಧ? ಬೇರೆಲ್ಲವನ್ನೂ ಪುಂಖಾನುಪುಂಖವಾಗಿ ಮಾತಾಡುವ ಮುಖ್ಯಮಂತ್ರಿಗಳು ಈ ಬಗ್ಗೆ ಮೌನ ಮುರಿಯದಿರುವುದೇಕೆ? ಸಿಎಂ ಕೂಡ ಈ ಅಕ್ರಮದಲ್ಲಿ ಪಾಲು ಹೊಂದಿರುವರೇ?
ರಾಜಕೀಯ ಒತ್ತಡದಿಂದ ಚಿಲುಮೆ ಸಂಸ್ಥೆಗೆ ಸಹಕರಿಸಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ. ಒತ್ತಡ ಹಾಕಿದ ರಾಜಕೀಯದವರು ಯಾರು? ಅವರ ಹಿತಾಸಕ್ತಿ ಏನಿತ್ತು? ಚಿಲುಮೆ ಸಂಸ್ಥೆಯ ಹಣದ ಮೂಲ ಯಾವುದು? ಚೆಕ್, ಲೆಟರ್ ಹೆಡ್ ಸಿಕ್ಕಿರುವ ಸಂಗತಿಯನ್ನು ಬಚ್ಚಿಡುತ್ತಿರುವುದೇಕೆ? ಅಕ್ರಮಗಳ ಮಹಾಪೋಷಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಜನತೆಗೆ ಉತ್ತರಿಸಬೇಕು ಎಂದು ಆಗ್ರಹಿಸಿದೆ.