ಚುನಾವಣೆಯಲ್ಲಿ 130 ಸ್ಥಾನವನ್ನು ಗೆಲ್ಲುತ್ತೇವೆ: ಯಾರೇ ಬಂದರೂ ಕೋಲಾರ ಕ್ಷೇತ್ರದಲ್ಲಿ ನಾನೇ ಗೆಲ್ಲುತ್ತೇನೆ: ಸಿದ್ದರಾಮಯ್ಯ

ಚುನಾವಣೆಯಲ್ಲಿ 130 ಸ್ಥಾನವನ್ನು ಗೆಲ್ಲುತ್ತೇವೆ: ಯಾರೇ ಬಂದರೂ ಕೋಲಾರ ಕ್ಷೇತ್ರದಲ್ಲಿ ನಾನೇ ಗೆಲ್ಲುತ್ತೇನೆ: ಸಿದ್ದರಾಮಯ್ಯ

ಮೈಸೂರು: ಮುಂದಿನ ಚುನಾವಣೆಯಲ್ಲಿ ನಾವು 130 ಸ್ಥಾನವನ್ನು ಗೆಲ್ಲುತ್ತೇವೆ. ಅದು 150 ಸ್ಥಾನ ಆದರೂ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನ ಕಾಂಗ್ರೆಸ್ ಅಧಿಕಾರದಲ್ಲಿ ಆಗಿದ್ದ ಕೆಲಸಗಳ ಬಗ್ಗೆ ತಿಳಿದುಕೊಂಡಿದ್ದಾರೆ.

ನಾವು ಹಿಂದೆ ಪ್ರಣಾಳಿಕೆಯಲ್ಲಿ ಹೇಳಿದ್ದ ಶೇಕಡ 99 ರಷ್ಟು ಕೆಲಸ ಮಾಡಿದ್ದೇವೆ. ಈ ಬಾರಿ 200 ಯುನಿಟ್ ಉಚಿತ ವಿದ್ಯುತ್, ಕುಟುಂಬ ಮುಖ್ಯಸ್ಥೆಗೆ ತಿಂಗಳಿಗೆ 2 ಸಾವಿರ ಹಣ ನೀಡುವುದಾಗಿ ಘೊಷಣೆ ಮಾಡಿದ್ದೇವೆ.ಹಲವು ಘೋಷಣೆಗಳನ್ನು ಮಾಡಲಿದ್ದೇವೆ. ಇವುಗಳು ಚುನಾವಣೆಯಲ್ಲಿ ನಮ್ಮ ಕೈ ಹಿಡಿಯುತ್ತವೆ. ಯಾರು ಏನೇ ಹೇಳಿದರೂ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇನ್ನೂ ಯಾರೇ ಬಂದರೂ ಕೋಲಾರ ಕ್ಷೇತ್ರದಲ್ಲಿ ನಾನೇ ಗೆಲ್ಲುತ್ತೇನೆ. ಬಾದಾಮಿಯಲ್ಲೂ ನನ್ನನ್ನು ಸೋಲಿಸಲು ಕೇಂದ್ರ ಸಚಿವ ಅಮಿತ್ ಶಾ ಬಂದಿದ್ದರು. ಆಶೋಕ್​ ಪಟ್ಟಣಶೆಟ್ಟಿ ಬದಲು ಶ್ರೀರಾಮುಲುರನ್ನು ಕಣಕ್ಕಿಳಿಸಿದರು. ಆದರೂ ಬಿಜೆಪಿಗೆ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಬಾದಾಮಿ ಕ್ಷೇತ್ರದಲ್ಲಿ 2 ದಿನಗಳ ಕಾಲವಷ್ಟೇ ಪ್ರಚಾರ ಮಾಡಿದ್ದೆ. ದೂರ ಅನ್ನೋ ಕಾರಣಕ್ಕೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಬಾದಾಮಿ ಕ್ಷೇತ್ರದ ಜನರು ಹೆಲಿಕಾಪ್ಟರ್​ ಕೊಡಿಸುತ್ತೇವೆ ಎಂದಿದ್ದರು. ಎಲ್ಲದಕ್ಕೂ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಕೋಲಾರದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.