ಅದಾನಿ ಕೇವಲ ನೆಪ ಮಾತ್ರ, ಆತ ಪ್ರಧಾನಿ ಮೋದಿಯ ಮ್ಯಾನೇಜರ್'' ; ಸಿಎಂ ಕೇಜ್ರಿವಾಲ್ ವಾಗ್ದಾಳಿ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಮೋದಿಯವರ ವಿರುದ್ಧ ತಮ್ಮ ದಾಳಿಯನ್ನು ಮುಂದುವರೆಸಿದ್ದಾರೆ.
ದೆಹಲಿ ವಿಧಾನಸೌಧದಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಯಾರಿಗೂ ಏನೂ ಮಾಡಿಲ್ಲ.
ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಯಾದರೆ ಅದಾನಿ ಮುಳುಗುವುದಿಲ್ಲ, ಮೋದಿಜೀ ಮುಳುಗುತ್ತಾರೆ. ನರೇಂದ್ರ ಮೋದಿ ಅವರು ತಮ್ಮ ಕುಟುಂಬಕ್ಕಾಗಿ ಏನನ್ನೂ ಮಾಡಲಿಲ್ಲ, ಆದರೆ ಅವರ ಸ್ನೇಹಿತನಿಗಾಗಿ ತುಂಬಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅದಾನಿ ಕೇವಲ ನೆಪ ಮಾತ್ರ ಮೋದಿಯ ಹಣ ಅದಾನಿ ಕಂಪನಿಯಲ್ಲಿ ಹೂಡಿಕೆಯಾಗಿದೆ. ಅವರು ಮೋದಿಯ ಮ್ಯಾನೇಜರ್, ಅವರು 10-15% ಕಮಿಷನ್ ಪಡೆಯುತ್ತಾರೆ. ಉಳಿದವು ಮೋದಿಜಿಯವರಿಗೆ ಸೇರಿದೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
442 ಮಿಲಿಯನ್ ಡಾಲರ್ ಮೊತ್ತದ ಪವನ ವಿದ್ಯುತ್ ಯೋಜನೆಯನ್ನು ಅದಾನಿ ಗ್ರೂಪ್‌ಗೆ ನೀಡುವಂತೆ ಶ್ರೀಲಂಕಾದ ಮೇಲೆ ಪ್ರಧಾನಿ ಮೋದಿ ಒತ್ತಡ ಹೇರಿದ್ದಾರೆ ಎಂದು ಸಿಎಂ ಕೇಜ್ರಿವಾಲ್ ಆರೋಪಿಸಿದ್ದಾರೆ.
ಎರಡು ವರ್ಷಗಳ ಹಿಂದೆ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಿದಾಗ ಕೊನೆಯ ಕ್ಷಣದಲ್ಲಿ ಹರಾಜಿನ ಕೆಲವು ಷರತ್ತುಗಳನ್ನು ತೆಗೆದುಹಾಕಲಾಯಿತು. ಆರು ವಿಮಾನ ನಿಲ್ದಾಣಗಳನ್ನು ಅದಾನಿ ಗ್ರೂಪ್‌ಗೆ ನೀಡಲಾಯಿತು ಎಂದೇಳಿದ್ದಾರೆ.