ಮುಸ್ಲಿಂ ಯುವಕನೊಂದಿಗೆ ಮಂಗಳೂರಿನಿಂದ ಸ್ಲೀಪರ್ ಬಸ್​ನಲ್ಲಿ ಬೆಂಗಳೂರಿಗೆ ಹೊರಟ ಹಿಂದೂ ಯುವತಿ; ಮಾರ್ಗಮಧ್ಯೆ ಹೈಡ್ರಾಮ

ಮುಸ್ಲಿಂ ಯುವಕನೊಂದಿಗೆ ಮಂಗಳೂರಿನಿಂದ ಸ್ಲೀಪರ್ ಬಸ್​ನಲ್ಲಿ ಬೆಂಗಳೂರಿಗೆ ಹೊರಟ ಹಿಂದೂ ಯುವತಿ; ಮಾರ್ಗಮಧ್ಯೆ ಹೈಡ್ರಾಮ

ಮಂಗಳೂರು: ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಸ್ಲೀಪರ್ ಕೋಚ್​ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿರುವು ಗೊತ್ತಾಗಿ, ಹಿಂದೂ ಕಾರ್ಯಕರ್ತರು ಬಸ್ಸನ್ನು ತಡೆದು ನಿಲ್ಲಿಸಿದ್ದಾರೆ. ಬಂಟ್ವಾಳ ತಾಲೂಕು ವ್ಯಾಪ್ತಿಯ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ಮಂಗಳೂರಿನಿಂದ ಬೆಂಗಳೂರಿಗೆ ಒಟ್ಟಿಗೆ ತೆರಳುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಬಸ್ಸನ್ನು ತಡೆದು, ಯುವತಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಹಿಂದೂ ಕಾರ್ಯಕರ್ತರು ಹಾಗೂ ಯುವತಿಯ ಮಧ್ಯೆ ನಡೆದ ಮಾತಿನ ಚಕಮಕಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾಹಿತಿ ಪಡೆದ ಸ್ಥಳಕ್ಕಾಗಮಿಸಿದ ಪೊಲೀಸರು ಹಿಂದೂ ಕಾರ್ಯಕರ್ತರು ಹಾಗೂ ಯುವಕ, ಯುವತಿಯನ್ನು ಠಾಣೆಗೆ ಕರೆದೊಯ್ದು, ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಮನೆಯವರ ಜತೆಗೆ ಯುವತಿಯನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಮುಸ್ಲಿಂ ಯುವಕ ಬೆಂಗಳೂರಿನಲ್ಲಿ ವಕೀಲನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಆಗಾಗ್ಗೇ ನಡೆಯುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಇಂತಹ ಒಟ್ಟು ಆರು ಪ್ರಕರಣಗಳು ಬೆಳಕಿಗೆ ಬಂದಿವೆ.