ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ 10 ಲಕ್ಷ ಪ್ರೋತ್ಸಾಹ ಧನ ಘೋಷಿಸಿ

ಬೆಂಗಳೂರು ; ಗ್ರಾಮೀಣ ರೈತಾಪಿ ಯುವಕರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ 10 ಲಕ್ಷ ಪ್ರೋತ್ಸಾಹ ಧನದ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಹಸಿರು ಪ್ರತಿಷ್ಠಾನ ಸರ್ಕಾರವನ್ನು ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಕೆ.ಜಿ ಕುಮಾರ್, ರೈತ ದೇಶದ ಬೆನ್ನೆಲುಬು ಎಂದು ಬೊಬ್ಬೆ ಹೊಡೆಯುವ ರಾಜಕಾರಣಿಗಳು ಗ್ರಾಮೀಣ ಯುವ ಕೃಷಿಕರ ಬಗ್ಗೆ ಚಿಂತಿಸಿ, ಚರ್ಚಿಸಿ, ಪರಿ ಹಾರ ನೀಡಬೇಕು ಎಂದು ಸವಾಲು ಹಾಕಿದರು.
ಈ ಬಗ್ಗೆ ರಾಜ್ಯ ಸರ್ಕಾರದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಮಂತ್ರಿ ಮಹೋದಯರು , ಶಾಸಕರು ಗ್ರಾಮೀಣ ಪ್ರದೇಶದ ರೈತಾಪಿ ಯುವಕರ ಬದುಕಿನ ಬಗ್ಗೆ ಗಮನಹರಿಸಿ , ಈ ಕುರಿತು ವಿಧಾನ ಮಂಡಲದ ಅವೇಶನದಲ್ಲಿ ಚರ್ಚಿಸಿ, ಯೋಜನೆ ರೂಪಿಸಿ ರೈತಾಪಿ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಷರತ್ತು ಬದ್ಧವಾಗಿ 10 ಲಕ್ಷ ರೂ.ಗಳ ಪ್ರೋತ್ಸಾಹ ಧನ ಸೇರಿದ ವಿಶೇಷ ಪ್ಯಾಕೇಜ್‍ನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.
ಈಗ ಈಗಾಗಲೇ ಅತಿವೃಷ್ಟಿ - ಅನಾವೃಷ್ಟಿ, ಬರಗಾಲ, ವಿವಿಧ ಕಾರಣಗಳಿಂದ ರೈತರು, ಕೂಲಿ ಕಾರ್ಮಿಕರು , ಕುಶಲಕರ್ಮಿಗಳು ಹಲವಾರು ಕಾರಣಗಳಿಂದ ಹಳ್ಳಿಗಳಿಂದ ಪಟ್ಟಣದತ್ತ ವಲಸೆ ಬಂದಿರುತ್ತಾರೆ. ಉಳಿದಿರುವ ಅಲ್ಪಸ್ವಲ್ಪ ರೈತಾಪಿ ಯುವಕರು ವ್ಯವಸಾಯದಲ್ಲಿ ತೊಡಗಿಕೊಂಡಿದ್ದಾರೆ.
ಈ ರೈತಾಪಿ ಯುವಕರು ಆರ್ಥಿಕವಾಗಿ ಸದೃಢರಾಗಿದ್ದರೂ ಕೂಡ ಯುವತಿಯರು ಉದ್ಯೋಗಸ್ಥ ಯುವಕರನ್ನು ಮಾತ್ರ ಮದುವೆಯಾಗಲು ಇಚ್ಛಿಸುತ್ತಾರೆ. ಹೀಗಿರುವಾಗ ರೈತರು ಕೃಷಿ ಕೈಬಿಟ್ಟು , ಉದ್ಯೋಗ ಅರಸಿಕೊಂಡು ಪಟ್ಟಣಕ್ಕೆ ಸೇರಿದರೆ ಗತಿಯೇನು ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶದ ರೈತಾಪಿ ಯುವಕರನ್ನು ಕಾಡುತ್ತಿರುವ ಈ ಸಾಮಾಜಿಕ ಪಿಡುಗಿಗೆ ಪರಿಹಾರ ರೂಪಿಸಬೇಕು . ಪಕ್ಷ ಭೇದ ಮರೆತು ಎಲ್ಲಾ ಶಾಸಕರು ಒಗ್ಗಟ್ಟಾಗಿ ರೈತಾಪಿ ಯುವಕರ ಬದುಕಿಗೆ ಒಂದು ಅರ್ಥವನ್ನು ರೂಪಿಸಿಕೊಡುವಲ್ಲ ಚಿಂತಿಸಿ , ಪರಿಹಾರವನ್ನು ಸರ್ಕಾರದಿಂದ ಕೊಡಿಸಿಕೊಡಬೇಕು ಎಂದು ಒತ್ತಾಯಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಹಸಿರು ಪ್ರತಿಷ್ಠಾನದ ರೇಣುಕಾ ಭಕ್ತರಹಳ್ಳಿ ಕಾರ್ಯಾಧ್ಯಕ್ಷ ಪಿ.ಕೆ.ಕುಮಾರ್, ಗೌರವಾಧ್ಯಕ್ಷ ಎ.ಎಸ್. ಗೋವಿಂದೇಗೌಡ, ಕೋಶಾಧ್ಯಕ್ಷ ಕೆ.ವೇಣುಗೋಪಾಲ್ , ಕಾರ್ಯದರ್ಶಿ ಬಿ.ರವೀಶ್ ಗೌಡ , ಮಾರ್ಗದರ್ಶಕರು ಹಾಗೂ ಒಕ್ಕಲಗರ ಸಂಘದ ನಿರ್ದೇಶಕರಾದ ಡಾ. ಟಿ.ಹೆಚ್.ಆಂಜನಪ್ಪ ಉಪಸ್ಥಿತರಿದ್ದರು.