ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ' : ಸ್ಪೀಕರ್ ಕಾಗೇರಿ ಮನವಿ

ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ' : ಸ್ಪೀಕರ್ ಕಾಗೇರಿ ಮನವಿ

ಬೆಂಗಳೂರು : ದೇಶವನ್ನು ಅಭಿವೃದ್ಧಿಯೆಡೆ ಸಾಗಿಸಲು, ಉತ್ತಮ ನಾಯಕರನ್ನು ಆಯ್ಕೆ ಮಾಡಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನವನ್ನು ಮಾಡಬೇಕು ಎಂದು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಭಿಪ್ರಾಯಪಟ್ಟರು.

ನಿನ್ನೆ ನಗರದ ಜ್ಞಾನಜೋತಿ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 'ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ' ಕುರಿತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಉತ್ಸವವಿದ್ದಂತೆ. ಮತದಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು. ರಾಜಕೀಯ ಕ್ಷೇತ್ರ ಮಾತ್ರವಲ್ಲದೆ ಇತರ ಕ್ಷೇತ್ರಗಳು ಕೂಡ ವ್ಯಾಪಾರಿಕರಣಗೊಂಡಿದೆ ಎಂದು ವಿಷಾದಿಸಿದರು.

ಮತದಾರರು ಮತವನ್ನು ಮಾರಾಟಕ್ಕೆ ಇಡಬೇಡಿ. ಉತ್ತಮ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯ ಮತವನ್ನು ಚಲಾವಣೆ ಮಾಡಿ. ಚುನಾವಣಾ ಆಯೋಗ ಸ್ವತಂತ್ರ ಸಂವಿಧಾನಬದ್ಧ ಸಂಸ್ಥೆಯಾಗಿದೆ. ಚುನಾವಣಾ ವ್ಯವಸ್ಥೆಯಲ್ಲಿ ನಿರಂತರವಾಗಿ ಸುಧಾರಣೆ ತರುವುದು ಆಯೋಗದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಚುನಾವಣಾ ಸಂದರ್ಭದಲ್ಲಿ ಜನರು ಹಣ, ಇನ್ನೂ ಮುಂತಾದ ವಸ್ತುಗಳಿಗೆ ಆಸೆಪಟ್ಟು ಮತವನ್ನು ಮಾರಿಕೊಳ್ಳಬಾರದು. ಚುನಾವಣಾ ಸಂದರ್ಭದಲ್ಲಿ ಮತ ಚಲಾಯಿಸಿ ಕುಟುಂಬದವರಿಗೂ ಮತ್ತು ಸುತ್ತಮುತ್ತಲಿನ ಜನರಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸಬೇಕು. ಮತ ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯ. ಎಂದಿಗೂ ಅಲಕ್ಷ್ಯಮಾಡಬೇಡಿ. ಮತ ಚಲಾಯಿಸುವುದರಿಂದ ನಮ್ಮ ಭವಿಷ್ಯ ಮತ್ತು ದೇಶದ ಭವಿಷ್ಯ ಉತ್ತಮವಾಗುತ್ತದೆ ಎಂದರು.

ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಜನಾಂದೋಲನ ಪ್ರಾರಂಭವಾಗಬೇಕು ಎಂದು ಕರೆ ಕೊಟ್ಟರು.ಸಂವಿಧಾನದ ಕೊಡುಗೆಯಿಂದ ಅಭಿವೃದ್ಧಿಯಲ್ಲಿ ಭಾರತ ದೇಶ ಎತ್ತರಕ್ಕೆ ಬೆಳೆದಿದೆ. ಸಂವಿಧಾನಬದ್ಧವಾಗಿ ಚುನಾವಣಾ ಆಯೋಗ ಸ್ಥಾಪಿತವಾಗಿದೆ. ನಮ್ಮ ಶ್ರೇಷ್ಠ ಸಂವಿಧಾನದ ರಚನೆಗೆ ಮುಖ್ಯ ಕಾರಣಕರ್ತರು ಡಾ|| ಬಿ.ಆರ್.ಅಂಬೇಡ್ಕರ್ ರವರು. ಸಾಮಾನ್ಯ ಪ್ರಜೆ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿ ಆಗಿರುವುದು ಇದಕ್ಕೆ ಕಾರಣ ನಮ್ಮ ಸಂವಿಧಾನ ಎಂದು ಅವರು ತಿಳಿಸಿದರು.

ಶೆಡ್ಯೂಲ್ 10ಅನ್ನು ಸಂವಿಧಾನದಲ್ಲಿ ಜಾರಿಗೆ ತಂದು ಪಕ್ಷಾಂತರ ನಿಷೇದ ಕಾಯ್ದೆ ಜಾರಿಗೆ ತಂದು ಉತ್ತಮ ಕಾರ್ಯ ಮಾಡಲಾಗಿದೆ. ಮತದಾನದಲ್ಲಿ ನೋಟಾ ಹಾಕಲು ಅವಕಾಶ ನೀಡಲಾಗಿದೆ. ವಿವಿಧ ಸಮಿತಿಗಳು ಚುನಾವಣಾ ಸುಧರಣೆಗೆ ಹಲವು ವರದಿಗಳನ್ನು ನೀಡಿದ್ದು ಅವನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವರಾದ ಮುನಿರತ್ನ, ಬಿ.ಬಿ.ಎಂ.ಪಿ ಆಯುಕ್ತರಾದ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಾಧಿಕಾರಿ ಸಂಗಪ್ಪ, ವಿಧಾನ ಸಭಾ ಕಾರ್ಯದರ್ಶಿ ವಿಶಾಲಾಕ್ಷಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.