ದೇವರು ನಿಜವಾಗಲೂ ಕ್ರೂರಿ ಅನಿಸ್ತಿದೆ: ನಟಿ ಮೇಘನಾ ರಾಜ್

ಬೆಂಗಳೂರು : ಸ್ಯಾಂಡಲ್‍ವುಡ್ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ನಿಧನ ಸದ್ಯ ಇಡೀ ಚಿತ್ರರಂಗವನ್ನೇ ದಂಗು ಬಡಿಸಿದೆ. ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದ ನಟನನ್ನು ಕಳೆದುಕೊಂಡ ಸ್ಯಾಂಡಲ್‍ವುಡ್ ಮಂದಿ ಅವಕ್ಕಾಗಿದ್ದಾರೆ. ಅಂತೆಯೇ ನಟಿ ಮೇಘನಾ ರಾಜ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ನಟ ಚಿರಂಜೀವಿ ಅಕಾಲಿಕ ಮರಣ ಇಡೀ ಚಿತ್ರರಂಗವೇ ಕಣ್ಣೀರಾಗುವಂತೆ ಮಾಡಿತ್ತು. ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಕೂಡ ಕಣ್ಣೀರು ಸುರಿಸಿದ್ದರು. ಇಂದಿಗೂ ಅಭಿಮಾನಿಗಳು ಒಂದಲ್ಲ ಒಂದು ವಿಚಾರದಲ್ಲಿ ಚಿರುವನ್ನು ಪದೇ ಪದೇ ನೆನಪು ಮಾಡಿಕೊಳ್ಳುತ್ತಿರುತ್ತಾರೆ.
ಚಿರು ತೀರಿಕೊಂಡ ಹಲವು ದಿನಗಳ ಬಳಿಕ ಮೇಘನಾ ರಾಜ್ ಅವರು ಚಿರು ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದರು. ಇದಕ್ಕೆ ಅಂದು ಪ್ರತಿಕ್ರಿಯಿಸಿದ್ದ ವಿಜಯ್, ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ, ದೇವರು ಕೂಡ ನಮ್ಮ ಜೊತೆ ಇದ್ದಾರೆ ಎಂದು ಹೇಳುವ ಮೂಲಕ ಮೇಘನಾ ಬೆನ್ನಿಗೆ ನಿಂತಿದ್ದರು. ಆದರೆ ವಿಜಯ್ ಕೂಡ ನಮ್ಮನ್ನು ಅಗಲಿದ್ದಾರೆ. ಹೀಗಾಗಿ ವಿಜಯ್ ಅವರ ಈ ಮಾತನ್ನು ಮೇಘನಾ ನೆನಪಿಸಿಕೊಂಡಿದ್ದಾರೆ.
ತಾವು ಬರೆದಿರುವ ಬರಹಕ್ಕೆ ವಿಜಯ್ ಪ್ರತಿಕ್ರಿಯಿಸಿದ್ದನ್ನು ಇನ್ ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿರುವ ಮೇಘನಾ, ದೇವರು ನಿಜವಾಗಲೂ ಕ್ರೂರಿ ಅನಿಸ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.