ಚುನಾವಣಾ ಆಯೋಗದ ನಿರ್ಧಾರ ಪರಿಣಾಮಬೀರದು': ಹೊಸ ಚಿಹ್ನೆ ಸ್ವೀಕರಿಸುವಂತೆ ಠಾಕ್ರೆಗೆ ಶರದ್ ಪವಾರ್ ಸಲಹೆ

ಪುಣೆ(ಮಹಾರಾಷ್ಟ್ರ): ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ (Sharad Pawar)ಅವರು ತಮ್ಮ ಮಿತ್ರ ಪಕ್ಷವಾದ ಉದ್ಧವ್ ಠಾಕ್ರೆ ಬಣ "ಬಿಲ್ಲು ಮತ್ತು ಬಾಣ" ಚಿಹ್ನೆಯನ್ನು ಕಳೆದುಕೊಂಡಿರುವ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ.
ಜನರು ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ ಎಂದು ಅವರು ಒತ್ತಿ ಹೇಳಿದ್ದಾರೆ.
ಭಾರತದ ಚುನಾವಣಾ ಆಯೋಗವು (ಇಸಿಐ) ಪಕ್ಷದ ಹೆಸರು "ಶಿವಸೇನೆ" ಹಾಗೂ ಪಕ್ಷದ ಚಿಹ್ನೆ "ಬಿಲ್ಲು ಮತ್ತು ಬಾಣ"ವನ್ನು ಏಕನಾಥ್ ಶಿಂದೆ ಬಣಕ್ಕೆ ನೀಡಲಾಗುವುದು ಎಂದು ಆದೇಶಿಸಿದ ನಂತರ ಪವಾರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣಾ ಆಯೋಗದ ನಿರ್ಧಾರವನ್ನು ಒಪ್ಪಿಕೊಂಡು ಹೊಸ ಚಿಹ್ನೆಯನ್ನು ತೆಗೆದುಕೊಳ್ಳುವಂತೆ ಎನ್‌ಸಿಪಿ ಮುಖ್ಯಸ್ಥರು ಠಾಕ್ರೆ ಅವರಿಗೆ ಸಲಹೆ ನೀಡಿದರು.
'ಇದು ಚುನಾವಣಾ ಆಯೋಗದ ನಿರ್ಧಾರ. ಒಮ್ಮೆ ನಿರ್ಧಾರ ನೀಡಿದ ನಂತರ ಯಾವುದೇ ಚರ್ಚೆ ಸಾಧ್ಯವಿಲ್ಲ, ಅದನ್ನು ಸ್ವೀಕರಿಸಿ ಹಾಗೂ ಹೊಸ ಚಿಹ್ನೆ ತೆಗೆದುಕೊಳ್ಳಿ, ಹಳೆಯ ಚಿಹ್ನೆ ಕಳೆದುಕೊಂಡಿರುವುದರಿಂದ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಏಕೆಂದರೆ ಜನರು ಹೊಸ ಚಿಹ್ನೆ ಸ್ವೀಕರಿಸುತ್ತಾರೆ. ಇದು ಮುಂದಿನ 15-30 ದಿನಗಳವರೆಗೆ ಚರ್ಚೆಯಲ್ಲಿ ಉಳಿಯುತ್ತದೆ, ಅಷ್ಟೆ" ಎಂದು ಪವಾರ್ ಹೇಳಿದರು.
"ಇಂದಿರಾಗಾಂಧಿಯವರು ಕೂಡ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದು ನನಗೆ ನೆನಪಿದೆ. ಕಾಂಗ್ರೆಸ್‌ನಲ್ಲಿ ನೊಗವಿರುವ ಎರಡು ಎತ್ತುಗಳ ಚಿಹ್ನೆ ಇತ್ತು. ನಂತರ ಅವರು ಅದನ್ನು ಕಳೆದುಕೊಂಡರು. 'ಹಸ್ತ' ವನ್ನು ಹೊಸ ಚಿಹ್ನೆಯಾಗಿ ಅಳವಡಿಸಿಕೊಂಡರು ಹಾಗೂ ಜನರು ಅದನ್ನು ಒಪ್ಪಿಕೊಂಡರು. ಅಂತೆಯೇ ಜನರು ಉದ್ಧವ್ ಠಾಕ್ರೆ ಬಣದ ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ'ಎಂದು ಪವಾರ್ ಹೇಳಿದರು.