ಈ ವರ್ಷ ದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ; ಕೇಕ್ ಕತ್ತರಿಸಿ ಸಕ್ಸಸ್ ಆಚರಿಸಿದ ಕಬ್ಜ ಚಿತ್ರತಂಡ!

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನ ಮೂರನೇ ಚಿತ್ರ ಕಬ್ಜ ಕಳೆದ ಶುಕ್ರವಾರ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಯಿತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಕಂಡಿರುವ ಈ ಚಿತ್ರ ಉಪೇಂದ್ರ ಸಿನಿ ಕೆರಿಯರ್‌ನ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ವಿಶ್ವದಾದ್ಯಂತ 4000 ಪರದೆಗಳಲ್ಲಿ ಚಿತ್ರ ತೆರೆಗೆ ಬಂದಿತು.
ಬಿಡುಗಡೆ ದಿನ ವಿಶ್ವದಾದ್ಯಂತ ಚಿತ್ರ 54 ಕೋಟಿ ರೂಪಾಯಿಗಳನ್ನು ಗಳಿಸಿದ ಕಬ್ಜ ಚಿತ್ರ ಎರಡೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ್ದು, ಭರ್ಜರಿ ಯಶಸ್ಸನ್ನು ಗಳಿಸಿದೆ. ಹೀಗೆ ಸಿನಿಮಾ ಗೆದ್ದ ಖುಷಿಯನ್ನು ಚಿತ್ರತಂಡ ಸೆಲೆಬ್ರೇಟ್ ಮಾಡಿದೆ. ನಟ ಉಪೇಂದ್ರ, ನಿರ್ದೇಶಕ ಆರ್ ಚಂದ್ರು ಹಾಗೂ ಕೆಪಿ ಶ್ರೀಕಾಂತ್ ಇನ್ನಿತರರು ಕೇಕ್ ಕತ್ತರಿಸುವ ಮೂಲಕ ಕಬ್ಜ ಚಿತ್ರದ ಯಶಸ್ಸನ್ನು ಆಚರಿಸಿದ್ದಾರೆ.
ಈ ಫೋಟೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಿನಿ ರಸಿಕರು ಹಾಗೂ ಉಪೇಂದ್ರ ಅಭಿಮಾನಿಗಳು ಕಬ್ಜ ಯಶಸ್ಸಿಗೆ ಶುಭಕೋರಿ ಕಾಮೆಂಟ್ ಮಾಡಿದ್ದಾರೆ. ಇನ್ನು ಚಿತ್ರತಂಡ ಕಬ್ಜ ಚಿತ್ರ ಎರಡೇ ದಿನಕ್ಕೆ ಅಧಿಕೃತವಾಗಿ ನೂರು ಕೋಟಿ ಕ್ಲಬ್ ಸೇರಿದೆ ಎಂಬ ವಿಷಯವನ್ನು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಿಳಿಸಿದೆ.
ಇನ್ನು ಕಬ್ಜ ಮಲ್ಟಿಸ್ಟಾರರ್ ಚಿತ್ರವಾಗಿದ್ದು, ರಿಯಲ್ ಸ್ಟಾರ್ ಉಪೇಂದ್ರ ಜತೆಗೆ ಕಿಚ್ಚ ಸುದೀಪ್ ಹಾಗೂ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಸಹ ಚಿತ್ರದಲ್ಲಿ ನಟಿಸಿದ್ದಾರೆ. ಆರ್ ಚಂದ್ರು ಅವರ ಈ ಮಲ್ಟಿಸ್ಟಾರ್ ಯೋಜನೆ ಕ್ಲಿಕ್ ಆಗಿದ್ದು, ಚಿತ್ರದ ಕೊನೆಯಲ್ಲಿ ಶಿವ ರಾಜ್‌ಕುಮಾರ್ ಎಂಟ್ರಿ ಬಳಿಕ ಕಬ್ಜ ಚಾಪ್ಟರ್ 2 ಬರಲಿದೆ ಎಂಬುದನ್ನು ತಿಳಿಸಿದ್ದಾರೆ.
ಹೀಗೆ ಮಲ್ಟಿಸ್ಟಾರ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಆರ್ ಚಂದ್ರು ಮತ್ತೊಬ್ಬ ಸ್ಟಾರ್ ನಟನನ್ನು ಕಬ್ಜ ಚಾಪ್ಟರ್ 2 ಚಿತ್ರಕ್ಕೆ ಕರೆತರಲು ಮುಂದಾಗಿದ್ದಾರೆ ಆರ್ ಚಂದ್ರು. ಹೌದು, ಕಬ್ಜ ಚಾಪ್ಟರ್ 2 ಚಿತ್ರದಲ್ಲಿ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸಲಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದು ಹರಿದಾಡುತ್ತಿದ್ದು, ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಜತೆಗೆ ಪವನ್ ಕಲ್ಯಾಣ್ ಫೋಟೊವನ್ನೂ ಸಹ ಈ ಪೋಸ್ಟರ್‌ನಲ್ಲಿ ಕಾಣಬಹುದಾಗಿದೆ.