ತಾಯಿಯನ್ನು ವಿದೇಶಿ ಪ್ರವಾಸಕ್ಕೆ ಕರೆದೊಯ್ದ ಪುತ್ರ: ಅಮ್ಮನ ಬಗ್ಗೆ ಮಗನಾಡಿದ ಮಾತುಗಳು ಮನಮುಟ್ಟುವಂತಿದೆ

ತಾಯಿಯನ್ನು ವಿದೇಶಿ ಪ್ರವಾಸಕ್ಕೆ ಕರೆದೊಯ್ದ ಪುತ್ರ: ಅಮ್ಮನ ಬಗ್ಗೆ ಮಗನಾಡಿದ ಮಾತುಗಳು ಮನಮುಟ್ಟುವಂತಿದೆ

ವದೆಹಲಿ: ಪಾಲಕರನ್ನು ತಮ್ಮ ಜೊತೆ ವಿದೇಶಕ್ಕೆ ಕರೆದೊಯ್ಯಬೇಕೆಂಬುದು ಅನೇಕರ ಕನಸು. ಏಕೆಂದರೆ, ಬಹುತೇಕ ಪಾಲಕರು ಇಂತಹ ಅವಕಾಶವನ್ನು ಹೊಂದಿರುವುದೇ ಇಲ್ಲ. ಇಡೀ ಜೀವನದನ್ನು ಹಳ್ಳಿಯಲ್ಲೇ ಕಳೆಯುತ್ತಿರುತ್ತಾರೆ. ಆಸೆ ಇದ್ದರೂ ಕೂಡ ಅದನ್ನು ಈಡೇರಿಸಿಕೊಳ್ಳುವ ಶಕ್ತಿ ಇರುವುದಿಲ್ಲ.

ಆರ್ಥಿಕ ಪರಿಸ್ಥಿತಿ ಸೇರಿದಂತೆ ಅನೇಕ ಕಾರಣಗಳಿಂದ ಇದು ಸಾಧ್ಯವಾಗುವುದಿಲ್ಲ.

ಕೆಲವೊಬ್ಬರು ಅನೇಕ ಸವಾಲುಗಳನ್ನು ಮಟ್ಟಿ ನಿಂತು ಪಾಲಕರಿಗೆ ವಿದೇಶಿ ದರ್ಶನ ಮಾಡಿಸುತ್ತಾರೆ. ಇದೀಗ ವ್ಯಕ್ತಿಯೊಬ್ಬ ತನ್ನ ಹಳ್ಳಿಯನ್ನು ಎಲ್ಲಿಯೂ ಪ್ರಯಾಣಿಸದ ತಾಯಿಯನ್ನು ಸಿಂಗಾಪುರಕ್ಕೆ ಕರೆದೊಯ್ಯುವ ಮೂಲಕ ಭಾರಿ ಸುದ್ದಿಯಾಗಿದ್ದಾನೆ. ಆತ ತಾಯಿಯನ್ನು ಏಕೆ ಕರೆದೊಯ್ದನು ಎಂಬುದರ ಕುರಿತು ಲಿಂಕ್ಡ್‌ಇನ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಎಲ್ಲರ ಮನಮುಟ್ಟಿದ್ದು, ನೆಟ್ಟಿಗರ ಪ್ರಶಂಸೆ ಗಳಿಸಿದೆ.

ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ ತಾಯಿಯನ್ನು ಪ್ರವಾಸ ಕರೆದೊಯ್ದ ವ್ಯಕ್ತಿಯನ್ನು ಸಿಂಗಾಪುರ್​ನಲ್ಲಿ ಕೆಲಸ ಮಾಡುವ ಬ್ಲಾಕ್‌ಚೈನ್ ಡೆವಲಪರ್ ದತ್ತಾತ್ರೇಯ ಜೆ ಎಂದು ಗುರುತಿಸಲಾಗಿದೆ. ಹಳದಿ ಸೀರೆಯುಟ್ಟ ತನ್ನ ತಾಯಿಯೊಂದಿಗೆ ಪ್ರವಾಸದ ಫೋಟೋಗಳನ್ನು ದತ್ತಾತ್ರೇಯ ಜೆ ಹಂಚಿಕೊಂಡಿದ್ದಾರೆ. ಪ್ರಪಂಚದ ಈ ಸುಂದರ ನಗರ ಹಾಗೂ ತನ್ನ ಕಚೇರಿಯನ್ನು ತಾಯಿಗೆ ತೋರಿಸಲು ಸಿಂಗಾಪುರ್​ಗೆ ಕರೆತರಲು ನಿರ್ಧರಿಸಿದ್ದಾಗಿ ದತ್ತಾತ್ರೆಯ ಜೆ ಹೇಳಿದ್ದಾರೆ.

ನಿನ್ನೆ ನಾನು, ನನ್ನ ತಾಯಿಯನ್ನು ಪ್ರಪಂಚದ ಈ ಸುಂದರ ನಗರವನ್ನು ತೋರಿಸಲು ಕರೆದುಕೊಂಡು ಹೋದೆ. ಇಂದು ನನ್ನ ಕಚೇರಿ ಮತ್ತು ನಗರ ಪ್ರದೇಶವನ್ನು ತೋರಿಸಲು ಕರೆದೊಯ್ಯಲು ನಿರ್ಧರಿಸಿದ್ದಾನೆ. ಅವಳು ಅನುಭವಿಸುತ್ತಿರುವ ಭಾವನೆಗಳು ಮತ್ತು ಸಂತೋಷವನ್ನು ವ್ಯಕ್ತಪಡಿಸುವುದು ತುಂಬಾ ಕಷ್ಟ ಎಂದು ದತ್ತಾತ್ರೇಯ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ನನ್ನ ತಾಯಿ ತನ್ನ ಇಡೀ ಜೀವನವನ್ನು ಹಳ್ಳಿಯಲ್ಲಿ ಕಳೆಯುತ್ತಿದ್ದರು ಮತ್ತು ಹತ್ತಿರದಿಂದ ಎಂದಿಗೂ ವಿಮಾನವನ್ನು ನೋಡಿಲ್ಲ ಎಂದು ದತ್ತಾತ್ರೇಯ ಹೇಳಿದ್ದಾರೆ. ತಮ್ಮ ತಲೆಮಾರಿನ ಮೊದಲನೆಯವಳು ಮತ್ತು ಅವರ ಹಳ್ಳಿಯಿಂದ ವಿದೇಶಕ್ಕೆ ಪ್ರಯಾಣಿಸಿದ ಎರಡನೇ ಮಹಿಳೆ ಎಂದು ಹೆಗ್ಗಳಿಕೆಗೆ ದತ್ತಾತ್ರೇಯ ಅವರ ತಾಯಿ ಪಾತ್ರರಾಗಿದ್ದಾರೆ.

ಇದು ಸಂತೋಷಕರ ಅಲ್ಲವೇ? ಎಂದು ಲಿಂಕ್ಡ್‌ಇನ್‌ನಲ್ಲಿ ದತ್ತಾತ್ರೇಯ ಪೋಸ್ಟ್​ ಹಂಚಿಕೊಂಡ ನಂತರ ಮೂರು ಲಕ್ಷಕ್ಕೂ ಹೆಚ್ಚು ಜನರು ಈ ಪೋಸ್ಟ್ ಅನ್ನು ಲೈಕ್​ ಮಾಡಿದ್ದಾರೆ. ನೆಟ್ಟಿಗರು ಕಾಮೆಂಟ್ ಮೂಲಕ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. (ಏಜೆನ್ಸೀಸ್​)