1994ರಿಂದ ಬಿಜೆಪಿ ಭದ್ರಕೋಟೆಯಾಗಿರುವ ಕಲ್ಪತರು ನಾಡಿನಲ್ಲಿ ಮತ್ತೆ ಕಮಲ ಅರಳುವುದೇ?

1994ರಿಂದ ಬಿಜೆಪಿ ಭದ್ರಕೋಟೆಯಾಗಿರುವ ಕಲ್ಪತರು ನಾಡಿನಲ್ಲಿ ಮತ್ತೆ ಕಮಲ ಅರಳುವುದೇ?

ತುಮಕೂರು, ಮಾರ್ಚ್ 19: ರಾಜ್ಯದಲ್ಲಿ 2ನೇ ಅತೀ ದೊಡ್ಡ ಜಿಲ್ಲೆ ಕಲ್ಪತರು ನಾಡಿನಲ್ಲಿ ಬಿಜೆಪಿ, ಕಾಂಗ್ರೆಸ್ ತಮ್ಮದೆ ಭದ್ರಕೋಟೆ ಮಾಡಿಕೊಂಡಿದ್ದವು. ಆದರೆ, ಕಾಲನಂತರ ಬಿಜೆಪಿ ಅದನ್ನು ತನ್ನ ಕೋಟೆಯನ್ನಾಗಿಸಿಕೊಳ್ಳುವತ್ತ ಜಯ ಸಾಧಿಸಿದೆ. ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರಗಳ ಪೈಕಿ ಈಗ ಬಿಜೆಪಿ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿಯದ್ದೇ ಪಾರುಪತ್ಯ.

ತುಮಕೂರು ನಗರ ಕ್ಷೇತ್ರದಿಂದ 1952ರಲ್ಲಿ ಕಾಂಗ್ರೆಸ್‌ನ ಎಂ.ವಿ.ರಾಮರಾವ್, 1962ರಲ್ಲಿ ತುಮಕೂರು ನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಜಿ.ಸಿ.ಭಾಗೀರಥಮ್ಮ ಗೆಲುವು ಸಾಧಿಸಿದರು. ಜಿಲ್ಲೆಯ ಮೊದಲ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 1994ರಿಂದ ನಿರಂತರವಾಗಿ ಬಿಜೆಪಿ ಗೆಲುವು ಸಾಧಿಸುತ್ತಾ ಬಂದಿದೆ.

ಶೈಕ್ಷಣಿಕ ಹಾಗೂ ಧಾರ್ಮಿಕ ನಗರವೆಂದು ಹೆಸರಾಗಿರುವ ತುಮಕೂರು ನಗರ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಭದ್ರ ಕೋಟೆಯೇ. ಮೊದಲ ಚುನಾವಣೆಯಿಂದ ಇಲ್ಲಿಯವರೆಗೆ ಆರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಪಿಎಸ್‌ಪಿ ಹಾಗೂ ಜೆಎನ್‌ಪಿ ಅಭ್ಯರ್ಥಿಗಳು ತಲಾ ಎರಡು ಸಲ ಗೆಲುವು ಸಾಧಿಸಿದ್ದಾರೆ. 1952ರಲ್ಲಿ ಕಾಂಗ್ರೆಸ್‌ನ ಎಂ.ವಿ.ರಾಮರಾವ್, 1957 ರಲ್ಲಿ ಜಿ.ಎನ್.ಪುಟ್ಟಣ್ಣ, 1962 ರಲ್ಲಿ ಜೆ.ಸಿ.ಭಾಗೀರಥಮ್ಮ ಕಾಂಗ್ರೆಸ್ ಶಾಸಕರಾಗಿದ್ದರು.

ಬಳಿಕ 1983ರಿಂದ ಜೆಎಸ್‌ಪಿಯಿಂದ ಲಕ್ಷಿ ನರಸಿಂಹಯ್ಯ ಎರಡು ಬಾರಿ ಗೆಲುವು ಸಾಧಿಸಿದ್ದರು. ಅನಂತರ 1989 ರಲ್ಲಿ ಕಾಂಗ್ರೆಸ್‌ನಿಂದ ಎಸ್.ಶಫಿ ಅಹಮದ್ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಹಿಡಿತದಲ್ಲಿ ಇದ್ದ ಕ್ಷೇತ್ರವನ್ನು 1994ರಲ್ಲಿ ಬಿಜೆಪಿ ಮೊದಲ ಬಾರಿಗೆ ತನ್ನ ವಶಕ್ಕೆ ತೆಗೆದುಕೊಂಡಿತು. ಆಗ ಸೊಗಡು ಶಿವಣ್ಣ ಶಾಸಕರಾಗಿ ಆಯ್ಕೆ ಆಗಿದ್ದರು. ನಂತರ ಸತತವಾಗಿ 1994, 1999, 2004, 2008 ನಾಲ್ಕು ಬಾರಿ ಆಯ್ಕೆಯಾಗುತ್ತಾ ಬಂದಿದ್ದರು.

ಎರಡು ದಶಕಗಳ ಕಾಲ ಬಿಜೆಪಿ ವಶದಲ್ಲಿದ್ದ ತುಮಕೂರು ನಗರ ವಿಧಾನಸಭಾ ಕ್ಷೇತ್ರ 2013ರಲ್ಲಿ ಕಾಂಗ್ರೆಸ್‌ ತನ್ನ ವಶಕ್ಕೆ ತೆಗೆದುಕೊಂಡಿತು. ರಫಿಕ್ ಅಹಮ್ಮದ್ ಶಾಸಕರಾಗಿ ಆಯ್ಕೆಯಾದರು. 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಜಿ.ಬಿ. ಜ್ಯೋತಿ ಗಣೇಶ್ ಸ್ಪರ್ಧಿಸಿದ ಪರಿಣಾಮ ವೀರಶೈವ ಮತಗಳ ವಿಭಜನೆಗೊಂಡು ಶಿವಣ್ಣ ಮತ್ತು ಜಿ.ಬಿ.ಜ್ಯೋತಿಗಣೇಶ್ ಇಬ್ಬರು ಸೋಲು ಕಂಡ ಕಾರಣ ಮತ್ತೆ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಬಿಜೆಪಿ ತನ್ನ ವಶಕ್ಕೆ ತೆಗೆದುಕೊಂಡಿತು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಬಿ.ಜ್ಯೋತಿಗಣೇಶ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಆದರೆ, ಈಗ ಭಾರತೀಯ ಜನತಾ ಪಕ್ಷಕ್ಕೆ ತಲೆನೋವಾಗಿರುವುದು ಟಿಕೆಟ್ ಪೈಪೋಟಿ. ನಗರದಲ್ಲಿ ಹಾಲಿ ಶಾಸಕ ಜ್ಯೋತಿ ಗಣೇಶ್ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ಇಬ್ಬರ ನಡುವೆ ಟಿಕೆಟ್ ಪೈಪೋಟಿ ಎದ್ದು ಕಾಣುತ್ತಿದೆ. ಇದು ಬಿಜೆಪಿಗೆ ಶಾಪವಾಗಿ ಮತ್ತೆ ಕಾಂಗ್ರೆಸ್ ಮರಳುವುದಕ್ಕೆ ಸಹಾಯಕವಾಗಲಿದೆ ಎಂಬ ವದಂ

ಕಾಂಗ್ರೆಸ್‌ನಲ್ಲಿ ಈ ಬಾರಿ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್‌ಗೆ ಟಿಕೆಟ್ ನೀಡುವ ಸಾಧ್ಯತೆಯಿದ್ದು, ಬಿಜೆಪಿಯ ಒಳ ಬೇಗುದಿ ಅವರ ಗೆಲುವಿಗೆ ಸಹಾಯಕವಾಗಲಿದೆ ಎನ್ನಲಾಗಿದೆ. ಜಾತ್ಯಾತೀತ ಜನತಾದಳ ಪಕ್ಷದಿಂದ ಕಳೆದ ಬಾರಿ 5,293 ಮತಗಳಿಂದ ಸೋಲು ಕಂಡಿರುವ ಎನ್.ಗೋವಿಂದರಾಜು ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಹಂತ ಹಂತವಾಗಿ ಬಿಜೆಪಿ ತನ್ನದನ್ನಾಗಿಸಿಕೊಂಡಿದೆ. ಈ ಬಾರಿಯಾದರೂ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ.

*ಜಾತಿವಾರು ಲೆಕ್ಕಾಚಾರ*

ತುಮಕೂರು ನಗರ ವಿಧಾನಸಭಾ ಕ್ಷೇತ್ರವು ಸಾಮಾನ್ಯ ವರ್ಗದ ವಿಧಾನಸಭಾ ಸ್ಥಾನವಾಗಿದೆ. ತುಮಕೂರು ಸಂಸತ್ತಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತದಾರರು ಸರಿಸುಮಾರು 31,293 ಇದ್ದಾರೆ. ಪರಿಶಿಷ್ಟ ಪಂಗಡದ (ಎಸ್‌ಟಿ) ಮತದಾರರು ಸರಿಸುಮಾರು 10,583 ಆಗಿದೆ. ಮುಸ್ಲಿಂ ಮತದಾರರು ಸರಿಸುಮಾರು 62,180 ಆಗಿದ್ದು, ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಸುಮಾರು 24.5% ರಷ್ಟಿದ್ದಾರೆ.