ಇಂಟಕ್‌ಗೆ ರಾಕೇಶ್‌ ಮಲ್ಲಿ ಗುಡ್‌ ಬೈ, ಚುನಾವಣೆ ವೇಳೆ ಹೊಸ ಬೆಳವಣಿಗೆ ?

ಇಂಟಕ್‌ಗೆ ರಾಕೇಶ್‌ ಮಲ್ಲಿ ಗುಡ್‌ ಬೈ, ಚುನಾವಣೆ ವೇಳೆ ಹೊಸ ಬೆಳವಣಿಗೆ ?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ವಿಧಾನಸಭಾ ಟಿಕೇಟ್‌ಗಾಗಿ ಭಾರೀ ಕದನ ನಡೆಯುತ್ತಿದೆ. ಈ ವೇಳೆ ಹೊಸದೊಂದು ಬೆಳವಣಿಗೆ ನಡೆದಿದೆ. ಇಂಟಕ್ ಸಂಘಟನೆಯಲ್ಲೂ ತೀವ್ರ ಅಸಮಾಧಾನ ಹೊಗೆಯಾಡಲಾರಂಭಿಸಿದೆ. ಇಂಟಕ್ ರಾಜ್ಯ ಕಮಿಟಿ, ಜಿಲ್ಲಾ ಕಮಿಟಿಯ ಪದಾಧಿಕಾರಿಗಳನ್ನು ಚುನಾವಣೆ ವೇಳೆಯಲ್ಲಿ ಏಕಾಏಕಿ ಬದಲಾಯಿಸಲಾಗಿದೆ.

ಇದು ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ, ಇಂಟಕ್ ಸಂಘಟನೆಯನ್ನು ಬಲಾಡ್ಯಗೊಳಿಸಿದ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಸಹಿತ ಇತರರ ಕೆಂಗಣ್ಣಿಗೆ ಕಾರಣವಾಗಿದೆ.

ಈ ಹಿಂದಿನ ರಾಜ್ಯಾಧ್ಯಕ್ಷ ಪ್ರಕಾಶಂ ನಿಧನ ಹೊಂದಿದ ಬಳಿಕ ಲಕ್ಷ್ಮೀ ವೆಂಕಟೇಶ್ ಅವರನ್ನು ತಾತ್ಕಾಲಿಕ ನೆಲೆಯಲ್ಲಿ ರಾಜ್ಯಾಧ್ಯಕ್ಷನನ್ನಾಗಿ ನೇಮಿಸಲಾಗಿತ್ತು. ಆದರೆ ತಾತ್ಕಾಲಿಕ ಅಧ್ಯಕ್ಷರು ಯಾವುದೇ ನೇಮಕ ಮಾಡಬೇಕಾದಲ್ಲಿ ರಾಷ್ಟ್ರೀಯ ಸಂಘಟನೆಯ ಅನುಮತಿ ಅಗತ್ಯವಿದೆ.

ಬೊಂಡಾಲ ಅಧ್ಯಕ್ಷ, ಸಂಘಟನೆ ಬಿಡುವರೆ ಮಲ್ಲಿ: ಇದೀಗ ನೂತನ ಜಿಲ್ಲಾ ಅಧ್ಯಕ್ಷನನ್ನಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ ಅವರನ್ನು ಏಕಾಏಕಿ ನೇಮಿಸಿದ್ದು, ಸಂಘಟನೆಯ ಇಬ್ಬಾಗಕ್ಕೆ ಕಾರಣವಾಗುವ ಸ್ಪಷ್ಟ ಸೂಚನೆ ಲಭಿಸಿದ್ದು ರಾಕೇಶ್ ಮಲ್ಲಿ ಅವರ ಮುಂದಾಳತ್ವದಲ್ಲಿ ಕರಾವಳಿಯಲ್ಲಿ ಅವರೇ ಕಟ್ಟಿ ಬೆಳೆಸಿದ ಇಂಟಕ್ ನ್ನು ತನ್ನ ಜತೆ ಕರೆದೊಯ್ದು ಪ್ರತಿತಂತ್ರವಾಗಿ ಪ್ರಬಲ ಕಾರ್ಮಿಕ ಸಂಘಟನೆಯನ್ನಾಗಿ ಮಾಡಲು ಬಿಎಂಎಸ್, ಎಚ್ ಎಂಎಸ್ ಜತೆ ಗುರುತಿಸಿಕೊಂಡರೂ ಅಚ್ಚರಿಯಿಲ್ಲ ಎಂದು ಸಂಘಟನೆಯಲ್ಲಿ ಗುಸು ಗುಸು ಕೇಳಲಾರಂಭಿಸಿದೆ. ರಾಕೇಶ್ ಮಲ್ಲಿ ಅವಧಿಯಲ್ಲಿ, ಮನೋಹರ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ಕುದ್ರೆಮುಖ ಸಂಸ್ಥೆ, ಎನ್ ಎಂಪಿಟಿ, ಗೂಡ್ ಶೆಡ್, ಟಿಂಬರ್ ಗಳಲ್ಲಿ ಇಂಟಕ್ ಕಾರ್ಮಿಕ ಸಂಘಟನೆ ಪ್ರಬಲ ಶಕ್ತಿಯಾಗಿ ಬೆಳೆದಿದೆ. ಒಂದು ವೇಳೆ ಮಲ್ಲಿ ಇಂಟಕ್ ಬಿಟ್ಟರೆ ಇದನ್ನು ಸಿಕ್ಕ ಅವಕಾಶ ಎಂಬಂತೆ ಬಿಜೆಪಿ ಮುಖಂಡರು ಬಿಎಂಎಸ್ ಕಾರ್ಮಿಕ ಸಂಘಟನೆಗೆ ಅವರನ್ನುಸೆಳೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇಂಟಕ್ ಇಂದು ಪ್ರಬಲ ಕಾರ್ಮಿಕ ಸಂಘಟನೆಯಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಹೀಗಿರುವಾಗ ಚುನಾವಣೆ ವೇಳೆಯಲ್ಲಿ ಸಂಘಟನೆಯ ಪದಾಧಿಕಾರಿಗಳನ್ನು ಬದಲಾಯಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ರಾಕೇಶ್ ಮಲ್ಲಿ ಜೊತೆಯಲ್ಲಿ ಗುರುತಿಸಿಕೊಂಡಿದ್ದ ಚಿತ್ತರಂಜನ್ ರೈಗೆ ಮಲ್ಲಿ ಅಭಿಪ್ರಾಯವನ್ನೂ ಕೇಳದೆ ಜಿಲ್ಲಾಧ್ಯಕ್ಷ ಹುದ್ದೆ ನೀಡಿರುವುದು ಸಂಘಟನೆಯೊಳಗೆ ಇರಿಸುಮುರಿಸಿಗೆ ಕಾರಣವಾಗಿದ್ದು ಈ ಬಗ್ಗೆ ಆಪ್ತರ ಬಳಿ ರಾಕೇಶ್ ಮಲ್ಲಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಇದು ಚುನಾವಣೆ ಸಮಯದಲ್ಲಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಭವಿಷ್ಯಕ್ಕೂ ಕಂಟಕವಾಗುವ ಎಲ್ಲ ಸೂಚನೆ ಲಭಿಸಿದೆ