ಹೊಸದಿಲ್ಲಿ: ಎಎಪಿ ಸಚಿವರ ರಾಜೀನಾಮೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು

ಹೊಸದಿಲ್ಲಿ: ಎಎಪಿ ಸಚಿವರ ರಾಜೀನಾಮೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು

ಹೊಸದಿಲ್ಲಿ: ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಇಬ್ಬರು ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಬೆಳವಣಿಗೆಯೊಂದರಲ್ಲಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಬುಧವಾರ ಇಬ್ಬರು ಸಚಿವರ ರಾಜೀನಾಮೆ ಸ್ವೀಕರಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಿಫಾರಸು ಮಾಡಿದ್ದಾರೆ.

ಮಂಗಳವಾರ ರಾಜೀನಾಮೆ ನೀಡಿದ ಸಚಿವರ ರಾಜೀನಾಮೆಯನ್ನು ಅಂಗೀಕರಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿಯ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ.

ಏತನ್ಮಧ್ಯೆ, ಸಿಸೋಡಿಯಾ ಅವರ ರಾಜೀನಾಮೆಯ ನಂತರ, ಎಎಪಿ ಸರ್ಕಾರವು ತನ್ನ ಇಬ್ಬರು ಕ್ಯಾಬಿನೆಟ್ ಸಹೋದ್ಯೋಗಿಗಳಾದ ಕೈಲಾಶ್ ಗೆಹ್ಲೋಟ್ ಮತ್ತು ರಾಜ್ ಕುಮಾರ್ ಆನಂದ್ ಅವರಿಗೆ ಸಿಸೋಡಿಯಾ ಅವರು ಜವಾಬ್ದಾರಿ ಹೊತ್ತಿದ್ದ ಇಲಾಖೆಗಳ ಮೇಲುಸ್ತುವಾರಿ ವಹಿಸಿದೆ.

ಸಿಸೋಡಿಯಾ ನಿರ್ವಹಿಸುತ್ತಿದ್ದ ಹಣಕಾಸು ಮತ್ತು ಪಿಡಬ್ಲ್ಯೂಡಿ ಸೇರಿದಂತೆ ಎಂಟು ಇಲಾಖೆಗಳ ಜವಾಬ್ದಾರಿಗಳನ್ನು ಗೆಹ್ಲೋಟ್ ಅವರಿಗೆ ನೀಡಲಾಗಿದ್ದು, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಉಳಿದ ಹತ್ತು ಇಲಾಖೆಗಳ ಜವಾಬ್ದಾರಿಗಳನ್ನು ಆನಂದ್ ಅವರಿಗೆ ವಹಿಸಲಾಗಿದೆ.

ಗೆಹ್ಲೋಟ್ ಮತ್ತು ಆನಂದ್ ಅವರಿಗೆ ಹೊಸ ಜವಾಬ್ದಾರಿಗಳನ್ನು ಹಸ್ತಾಂತರಿಸುವುದರೊಂದಿಗೆ, ಇಬ್ಬರೂ ಮಂತ್ರಿಗಳು ಈಗ ತಲಾ 14 ಇಲಾಖೆಗಳನ್ನು ಹೊಂದಲಿದ್ದಾರೆ.

ಗೆಹ್ಲೋಟ್ ಪ್ರಸ್ತುತ ಕಾನೂನು, ನ್ಯಾಯ ಮತ್ತು ಶಾಸಕಾಂಗ ವ್ಯವಹಾರಗಳು, ಸಾರಿಗೆ, ಆಡಳಿತ ಸುಧಾರಣೆಗಳು, ಮಾಹಿತಿ ತಂತ್ರಜ್ಞಾನ, ಕಂದಾಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಆರು ಇಲಾಖೆಗಳನ್ನು ನಿರ್ವಹಿಸುತ್ತಿದ್ದರು.

ರಾಜ್ಕುಮಾರ್ ಆನಂದ್ ಅವರು ಗುರುದ್ವಾರ ಚುನಾವಣೆ, ಎಸ್ಸಿ ಮತ್ತು ಎಸ್ಟಿ, ಸಮಾಜ ಕಲ್ಯಾಣ ಮತ್ತು ಸಹಕಾರ ಎಂಬ ನಾಲ್ಕು ಇಲಾಖೆಗಳ ಸಚಿವರಾಗಿದ್ದರು.