ಹಿರಿಯ ನಟ ಅನಂತ್ ನಾಗ್ ಹೇಳಿಕೆಗೆ ನಟ ಚೇತನ್ ಖಂಡನೆ

ಬೆಂಗಳೂರು : 'ಭಾರತ ಸುರಕ್ಷಿತವಲ್ಲ ಎಂದು ಹೇಳಿದ್ದ ನಟರು ಅಫ್ಘಾನಿಸ್ತಾನಕ್ಕೆ ಹೋಗಲಿ, ಅಲ್ಲಿನ ‘ಸ್ವರ್ಗ’ದಲ್ಲಿ ಆರಾಮವಾಗಿ ಜೀವನ ಮಾಡಲಿ” ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್‌ನಾಗ್ ಅವರ ಹೇಳಿಕೆಗೆ ಸ್ಯಾಂಡಲ್ವುಡ್ ನಟ ಚೇತನ್ ಕುಮಾರ್ ಖಂಡಿಸಿದ್ದಾರೆ.
”ಇಲ್ಲಿ ಕೆಲವು ನಟರು ಹೇಳಿದ್ದಾರಲ್ಲ, ನಮಗೆ ಭದ್ರತೆ ಇಲ್ಲ, ಭಾರತದಲ್ಲಿ ಇರಲು ಭಯವಾಗ್ತಿದೆ ಅಂತ. ಅಂಥಹವರು ಆರಾಮವಾಗಿ ಅಫ್ಘಾನಿಸ್ತಾನಕ್ಕೆ ಹೋಗಿ ಅಲ್ಲಿರಬಹುದು” ಎಂದು ಅನಂತ್ ನಾಗ್ ಅವರು ನಿನ್ನೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಚೇತನ್, ಇತಿಹಾಸ/ಭೌಗೋಳಿಕ ರಾಜಕೀಯದ ಬಗ್ಗೆ ಅವರ ಆಲೋಚನೆಗಳಲ್ಲಿ ಹಿಂಜರಿತ, ಸೀಮಿತ ಮತ್ತು ಪಂಥೀಯತೆ ಕಾಣುತ್ತವೆ. ಯಾವ ನಟರು ಇಲ್ಲಿ ಸುರಕ್ಷತೆ ಇಲ್ಲ ಎಂದು ಭಾವಿಸುವವರು, ಆ ‘ಸ್ವರ್ಗ’ಕ್ಕೆ [ಅಫ್ಘಾನಿಸ್ತಾನ] ಹೋಗಬಹುದು ಎಂದಿದ್ದಾರೆ. ಸಹಿಷ್ಣುತೆಯು ಕ್ರೂರತೆಯನ್ನು ವಿಮರ್ಶಿಸುವುದು ವಿಪರ್ಯಾಸ” ಎಂದು ಟೀಕಿಸಿದ್ದಾರೆ.
ಇನ್ನು ಸಂದರ್ಶನದ ವೇಳೆ ಮಾತನಾಡಿರುವ ಅನಂತ್ ನಾಗ್ , ”ಇಂತಹ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಕೈಲಾದದನ್ನು ಮಾಡಬೇಕು ಅಂತಲೇ ಮೋದಿ ಅವರು ಎಲ್ಲರಿಗೂ ವೀಸಾ, ಮುಸಲ್ಮಾನರಿಗೆ 180 ದಿನದ ವೀಸಾ ಕೊಡುತ್ತೇವೆ ಎಂದು ಘೋಷಿಸಿದ್ದಾರೆ. ಹಾಗಾಗಿ ನಾವು ಆಶಾದಾಯಕವಾಗಿ ಇರೋಣ. ಇನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಖಂಡಿತ ಇದೆ ಆದರೆ ಈ ವಿಷಯ ನಮ್ಮ ಭದ್ರತಾ ಮುಖ್ಯಸ್ಥರಿಗೂ ತಿಳಿದಿದೆ ಅದಕ್ಕೆ ಸೂಕ್ತಕ್ರಮವನ್ನು ಅವರು ತೆಗೆದುಕೊಳ್ಳುತ್ತಾರೆ. ಹಿಂದೆ ಏನು ಆಗಬೇಕಾದದ್ದು ಆಗಿರಲಿಲ್ಲವೊ ಅದು ಮೋದಿ ಅವರ ನೇತೃತ್ವದಲ್ಲಿ ಆಗುತ್ತದೆ, ಮೋದಿ ಮಾಡಿ ತೋರಿಸುತ್ತಾರೆ ಎಂಬ ನಂಬಿಕೆ ನನ್ನದು” ಎಂದಿದ್ದಾರೆ.