ಚಿಕ್ಕಬಳ್ಳಾಪುರದಲ್ಲಿ ವೋಲ್ವೋ ಬಸ್ ಸೇವೆ ಆರಂಭಿಸಿದ ಬಿಎಂಟಿಸಿ: ದಶಕಗಳ ಕನಸು ನನಸು
ಯಾವ ಬಸ್ ನಿಲ್ದಾಣಗಳಿಂದ ಎಷ್ಟು ಗಂಟೆಗೆ ಬಸ್ ಹೊರಡಲಿದೆ ವೇಳಾಪಟ್ಟಿ ಇಲ್ಲಿದೆ.. ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಬಸ್ ಹೊರಡಲಿರುವ ಸಮಯ ಬೆಳಿಗ್ಗೆ 8.10, 8.20, ಮಧ್ಯಾಹ್ನ 12.35, 1.05, ಸಂಜೆ 7.15, 7.35 ಕ್ಕೆ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೊರಡಲಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್ ಹೊರಡಲಿರುವ ಸಮಯ ಬೆಳಿಗ್ಗೆ 10.25, 11.00, ಸಂಜೆ 5.30, 5.45, ರಾತ್ರಿ 9.15, 9. 35 ಕ್ಕೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸಂಚರಿಸಲಿದೆ.
ಯುಗಾದಿ ಕೊಡುಗೆ ಎಂದ ಸಚಿವ ಸುಧಾಕರ್ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿ “ಚಿಕ್ಕಬಳ್ಳಾಪುರ ಜನತೆಗೆ ಯುಗಾದಿ ಕೊಡುಗೆ ಎಂದು ಹೇಳಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುವ ಜಿಲ್ಲೆಯ ಜನತೆಯ ಬಹುನಿರೀಕ್ಷಿತ ಬೇಡಿಕೆಯಂತೆ ಬಿಎಂಟಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಇನ್ನು ಮುಂದೆ ಬಿಎಂಟಿಸಿ ಬಸ್ಸುಗಳು ನಮ್ಮ ಚಿಕ್ಕಬಳ್ಳಾಪುರಕ್ಕೂ ಸಂಚರಿಸಲಿವೆ. ಇದರಿಂದ ರೈತರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಉದ್ಯೋಗಿಗಳು ಸೇರಿದಂತೆ ದಿನನಿತ್ಯ ಬೆಂಗಳೂರಿಗೆ ಓಡಾಡುವ ಚಿಕ್ಕಬಳ್ಳಾಪುರದ ಎಲ್ಲ ನಾಗರಿಕರಿಗೂ ಇದರಿಂದ ಅನುಕೂಲವಾಗಲಿದ್ದು, ಜಿಲ್ಲೆಯ ಆರ್ಥಿಕ ಪ್ರಗತಿಗೂ ವೇಗ ದೊರೆಯಲಿದೆ. ಚಿಕ್ಕಬಳ್ಳಾಪುರದ ಜನತೆಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳು. ಈ ಬೇಡಿಕೆಯನ್ನು ಸಾಕಾರಗೊಳಿಸಲು ಶ್ರಮಿಸಿದ ಬಿಎಂಟಿಸಿ ಉಪಾಧ್ಯಕ್ಷರಾದ ನವೀನ್ ಕಿರಣ್ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.