ಮೈಸೂರು ಗ್ಯಾಂಗ್ ರೇಪ್ ;ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ದುಷ್ಕರ್ಮಿಗಳು, ದೂರು ಕೊಟ್ರೆ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಬೆದರಿಕೆ..!

ಮೈಸೂರು ಗ್ಯಾಂಗ್ ರೇಪ್ ;ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ದುಷ್ಕರ್ಮಿಗಳು, ದೂರು ಕೊಟ್ರೆ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಬೆದರಿಕೆ..!
ಮೈಸೂರು : ಮೈಸೂರಿನ ಲಲಿತಾದ್ರಿಪುರದಲ್ಲಿ ನಡೆದಿದ್ದ ಬೇರೆ ರಾಜ್ಯದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿದೆ.
ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಮಾಡಿದ್ದ ಆರೋಪಿ ಗಳು ಯುವತಿಯ ವಿಡಿಯೋವನ್ನು ಸೆರೆ ಹಿಡಿದು, ಮೂರು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದೆ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಾಮುಂಡಿಯ ತಪ್ಪಲಿನಲ್ಲಿ ಬೇರೆ ರಾಜ್ಯದ ವಿದ್ಯಾರ್ಥಿನಿಯೋರ್ವಳು ತನ್ನ ಸ್ನೇಹಿತನ ಜೊತೆಗೆಯಲ್ಲಿ ಕುಳಿತಿದ್ದ ವೇಳೆಯಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳು ಯುವಕನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದರು. ಅಲ್ಲದೇ ಕಾಮುಕರ ಅಟ್ಟಹಾಸವನ್ನು ವಿಡಿಯೋ ಮಾಡಿಕೊಂಡು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಸುಮಾರು 3 ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಇದಕ್ಕೆ ಸಂತ್ರಸ್ತೆ ಹಾಗೂ ಆಕೆಯ ಗೆಳೆಯ ಕೂಡ ಒಪ್ಪಿದ್ದರು. ಆದರೆ ಹಣ ಕೇಳಿ 2 ಗಂಟೆಯಾದರೂ ಸಂತ್ರಸ್ತೆಗೆ ಹಣ ಕೊಡಲು ಸಾಧ್ಯವಾಗದಿದ್ದಾಗ, ಕಾಮುಕರು ಆಕೆಯ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಕಲ್ಲಿನಿಂದ ಹೊಡೆದು ಇಬ್ಬರ ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೆ, ದುಷ್ಕರ್ಮಿಗಳು ಪೊಲಿಸ್ ದೂರು ಕೊಡದಂತೆ ಬೆದರಿಕೆ ಹಾಕಿದ್ದರು ಎನ್ನಲಾಗುತ್ತಿದೆ. ಅತ್ಯಾಚಾರದ ಮಾಡಿ ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು, ಪೊಲೀಸರಿಗೆ ದೂರು ಕೊಟ್ಟರೆ ರೇಪ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ.
ಪ್ರಾಣಾಪಾಯದಿಂದ ಪಾರು..
ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಹಲ್ಲೆಗೊಳಗಾಗಿದ್ದ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯಾರ್ಥಿನಿ ಮೈಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದವು. ಗೆಳೆಯನ ಮುಖ ಹಾಗೂ ತಲೆ ಮೇಲೆ ಗಾಯಗಳಾಗಿದ್ದವು. ಇಬ್ಬರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯ ಇಬ್ಬರೂ ಚೇತರಿಸಿಕೊಂಡಿದ್ದಾರೆ. ಪೊಲೀಸರಿಗೆ ಹೇಳಿಕೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದಾಗಿ ಯುವತಿ ಭಯಗೊಂಡಿದ್ದಾಳೆ. ಪೊಲೀಸರ ಮುಂದೆ ಸಂತ್ರಸ್ತೆಯ ಸ್ನೇಹಿತ ಹಲವು ಮಾಹಿತಿಯನ್ನು ನೀಡಿದ್ದಾಳೆ. ನಂತರ ಯುವತಿಯ ಹೇಳಿಕೆಯನ್ನು ಕೂಡ ಪೊಲೀಸರು ಪಡೆದುಕೊಂಡಿದ್ದಾರೆ. ಇನ್ನೊಂದೆಡೆಯಲ್ಲಿ ಪೊಲೀಸರು ಈಗಾಗಲೇ ಘಟನಾ ಸ್ಥಳದ ಮಹಜರು ಕಾರ್ಯವನ್ನು ನಡೆಸಿದ್ದಾರೆ. ಸ್ಥಳದಲ್ಲಿ ಯಾವುದಾದರೂ ಸಾಕ್ಷ್ಯಗಳು ಸಿಗುತ್ತವೆಯೇ ಎಂದು ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ದೇಶದಾದ್ಯಂತ ಸುದ್ದಿಯಾಗಿರುವ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳ ಪತ್ತೆಗಾಗಿ ಪೊಲೀಸರು ಈಗಾಗಲೇ ಬಲೆ ಬೀಸಿದ್ದಾರೆ. ಈಗಾಗಲೇ ಮೊಬೈಲ್ ಟವರ್ ಆಧರಿಸಿ, ಅತ್ಯಾಚಾರ ನಡೆದ ವೇಳೆಯಲ್ಲಿ ಈ ಲೊಕೇಷನ್‌ನಲ್ಲಿ ಯಾವೆಲ್ಲಾ ಮೊಬೈಲ್ ಗಳು ಕಾರ್ಯಚರಿಸಿವೆ ಎನ್ನುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಘಟನೆ ನಡೆದಿರುವ ಪ್ರದೇಶ ಸಂಪೂರ್ಣವಾಗಿ ನಿರ್ಜನ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಪಾರ್ಟಿಗಳು ನಡೆಯುತ್ತಿತ್ತು ಎನ್ನುವ ಮಾಹಿತಿಯು ಲಭ್ಯವಾಗಿದೆ.