ನವಲೂರು ಬ್ರಿಜ್ ನಿರ್ಮಾಣದಲ್ಲಿ ಅವ್ಯವಹಾರ: ತನಿಖೆಗೆ ಆದೇಶಿಸಿದ ಲೋಕಾಯುಕ್ತ
ಧಾರವಾಡದ ನವಲೂರು ಬಳಿ ಬಿಆರ್ಟಿಎಸ್ ಯೋಜನೆಯಡಿ ನಿರ್ಮಿಸಲಾಗಿರುವ ಕಳಪೆ ಸೇತುವೆ ಕಾಮಗಾರಿ ಕುರಿತು ಸೂಕ್ತ ತನಿಖೆ ನಡೆಸಿ, ಗುತ್ತಿಗೆದಾರ ಹಾಗೂ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರವೇ ಸ್ವತಂತ್ರ ಬಣದ ರಾಜ್ಯ ಅಧ್ಯಕ್ಷ ನಾಗರಾಜ ಕರೆಣ್ಣವರ ಅವರು ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ 2020ರಲ್ಲಿ ದೂರು ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ನವಲೂರು ಬ್ರಿಜ್ ಕಾಮಗಾರಿ ಕುರಿತು ತನಿಖೆ ಆರಂಭವಾಗಿದೆ. ಇನ್ನು ಈ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ಸೇತುವೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ತನಿಖಾ ಸಮಿತಿಯೊಂದನ್ನು ರಚಿಸಿದ್ದಾರೆ. ತನಿಖಾಧಿಕಾರಿಯಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ರವಿಶಂಕರ ಅವರನ್ನು ನೇಮಿಸಲಾಗಿದೆ. ಇಂದು ಆರ್.ರವಿಶಂಕರ ಅವರು ನವಲೂರು ಸೇತುವೆ ಕಾಮಗಾರಿ ಪರಿಶೀಲಿಸಿದ್ದಾರೆ. ಈ ವೇಳೆ ದೂರು ಸಲ್ಲಿಸಿದ್ದ ನಾಗರಾಜ ಕರೆಣ್ಣವರ ಸಹ ತನಿಖಾಧಿಕಾರಿಗಳ ಜೊತೆಗಿದ್ದು, ಕಾಮಗಾರಿ ಬಗ್ಗೆ ವಿವರಣೆ ನೀಡಿದ್ದಾರೆ...ನವಲೂರು ಸೇತುವೆ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ಆ ಬಗ್ಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿಗಳು ತನಿಖಾಧಿಕಾರಿಗೆ ಸೂಚನೆ ನೀಡಿದ್ದಾರೆ. ಇನ್ನೂ ಈ ಸೇತುವೆ ಕಳಪೆ ಕಾಮಗಾರಿಯಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಒಟ್ಟಾರೆ ತನಿಖಾಧಿಕಾರಿಗಳು ನೀಡುವ ವರದಿ ಮೇಲೆ ಎಲ್ಲವೂ ನಿಂತಿದೆ.