ಏಕಮುಖ ಪ್ರೀತಿ ಸರಿಯಲ್ಲ ಎಂದು ಬುದ್ದಿವಾದ ಹೇಳಿದ್ದಕ್ಕೆ ಯುವತಿಯ ತಂದೆಯನ್ನೆ ಕೊಂದ ದುಷ್ಕರ್ಮಿ

ಬೆಂಗಳೂರು : ಏಕಮುಖ ಪ್ರೀತಿ ಸರಿಯಲ್ಲ ಎಂದು ಬುದ್ದಿವಾದ ಹೇಳಿ ಕಳಿಸಿದ್ದಕ್ಕೆ ಯುವತಿಯ ತಂದೆಯನ್ನೇ ಯುವಕ ಹತ್ಯೆಗೈದಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬೆತ್ತನಗೆರೆ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದ್ದು, ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಮೂಲದ ನಾಗಪ್ಪ ನೆಲಮಂಗಲ ನಗರದ ಬೆತ್ತನಗೆರೆ ರಸ್ತೆಯಲ್ಲಿ ಇತ್ತೀಚೆಗೆ ಮನೆ ಕಟ್ಟಿಕೊಂಡು ವಾಸವಿದ್ದರು. ಪೆಪ್ಸಿಕೋ ಕಂಪೆನಿಗೆ ಕೆಲಸಕ್ಕೆ ತೆರಳುತ್ತಿದ್ದ ಸಮಯದಲ್ಲಿ ಅಡ್ಡಗಟ್ಟಿದ ಇಬ್ಬರು ಯುವಕರು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಸೋಮವಾರ ನರೇಶ್ ಎಂಬ ಯುವಕ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ನಾಗಪ್ಪ ಅವರ ಮನೆಯ ಮುಂದೆ ಗಲಾಟೆ ಮಾಡಿದ್ದು, ಈ ವಿಚಾರವಾಗಿ ಯುವಕ ನರೇಶ್‍ಗೆ ಬುದ್ದಿವಾದ ಹೇಳಿದ್ದರಂತೆ, ಇದರಿಂದ ಕೋಪಗೊಂಡ ಪಾಗಲ್ ಪ್ರೇಮಿ ನರೇಶ್ ಈ ಕೊಲೆ ಮಾಡಿರುವುದಾಗಿ ಮೃತ ನಾಗಪ್ಪನ ಸಂಬಂಧಿ ಸುರೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತ ನಾಗಪ್ಪ ತನ್ನ ಮಗನ ಜೊತೆ ಬಸ್ ನಿಲ್ದಾಣಕ್ಕೆ ಡ್ರಾಪ್ ತೆಗೆದುಕೊಳ್ಳುವ ವೇಳೆ ಅಡ್ಡಗಟ್ಟಿದ ಯುವಕರು ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದು, ಹೆಚ್ಚಿನ ವಿಚಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.