ನನಗೆ ತೃಪ್ತಿ ಕೊಟ್ಟ ಸಿನಿಮಾವಿದು: 100 ಬಗ್ಗೆ ರಮೇಶ್‌ ವಿಶ್ವಾಸ

ನನಗೆ ತೃಪ್ತಿ ಕೊಟ್ಟ ಸಿನಿಮಾವಿದು: 100 ಬಗ್ಗೆ ರಮೇಶ್‌ ವಿಶ್ವಾಸ

ರಮೇಶ್‌ ಅರವಿಂದ್‌ ಎಕ್ಸೈಟ್‌ ಆಗಿದ್ದಾರೆ. ಅದಕ್ಕೆ ಕಾರಣ, ಅವರ ನಟನೆ, ನಿರ್ದೇಶನದ “100′ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ರಮೇಶ್‌ ಅರವಿಂದ್‌ ಅವರಿಗೆ ಇದು ಹೊಸ ಜಾನರ್‌ನ ಸಿನಿಮಾವಾದ್ದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದ ಕಥೆ ಸೈಬರ್‌ ಕ್ರೈಂಗೆ ಸಂಬಂಧಿಸಿದ್ದರೂ, ಒಂದಷ್ಟು ಫ್ಯಾಮಿಲಿ ಅಂಶಗಳು ಕೂಡಾ ತುಂಬಿ ಕೊಂಡಿವೆ.

ಇವತ್ತಿನ ಡಿಜಿಟಲ್‌ ಯುಗದಲ್ಲಿ ಅತಿಯಾದ ಮೊಬೈಲ್‌ ಬಳಕೆ, ಮುಂದೆ ಹೇಗೆ ನಮ್ಮ ನೆಮ್ಮದಿ ಕಿತ್ತುಕೊಳ್ಳಬಹುದು ಎಂಬ ಅಂಶವನ್ನು ಚಿತ್ರದಲ್ಲಿ ಹೇಳಿದ್ದಾರೆ.

ಈ ಚಿತ್ರದ ಬಗ್ಗೆ “ಇಲ್ಲಿವರೆಗೆ ನಾನು 100ಕ್ಕೂ ಹೆಚ್ಚು ಚಿತ್ರ ಮಾಡಿದ್ದೇನೆ. ಆದರೆ, ಯಾವುದೇ ಸಿನಿಮಾದಲ್ಲೂ ನಾನು ಒಬ್ಬ ಖಡಕ್‌ ವಿಲನ್‌ ಎದುರು ನಿಂತು ಫೈಟ್‌ ಮಾಡಿಲ್ಲ. ಏಕೆಂದರೆ ನನ್ನ ಸಿನಿಮಾಗಳಲ್ಲಿ ಸನ್ನಿವೇಶ, ಸಂದರ್ಭಗಳೇ ವಿಲನ್‌ ಆಗಿರುತ್ತಿದ್ದವು. ಆದರೆ, “100′ ಅದಕ್ಕೆ ವಿರುದ್ಧ. ಇಲ್ಲೊಬ್ಬ ವಿಲನ್‌ ಇದ್ದಾನೆ. ಅವನ ಜೊತೆ ನಾನು ದೈಹಿಕವಾಗಿ ಹೊಡೆದಾಡಿದ್ದೇನೆ. ಫೈಟ್‌ ಮಾಸ್ಟರ್‌ ಇಟ್ಟು ಸಾಹಸ ಸಂಯೋಜಿಸಲಾಗಿದೆ. ಈ ತರಹದ ಅನುಭವ ನನಗೆ ಹೊಸದು ಎಂದರೆ ತಪ್ಪಲ್ಲ. ಆ ಫೈಟ್ಸ್‌ ನನಗೆ ಮಜಾ ಕೊಟ್ಟಿದ್ದು ಸುಳ್ಳಲ್ಲ’ ಎನ್ನುವುದು ರಮೇಶ್‌ ಅರವಿಂದ್‌ ಅವರ ಮಾತು.

ಚಿತ್ರದ ಕಂಟೆಂಟ್‌ ಬಗ್ಗೆ ಮಾತನಾಡುವ ರಮೇಶ್‌, “ಹುಡುಗಿಯರನ್ನು ಹುಡುಗರು ಫಾಲೋ ಮಾಡೋದು, ತೊಂದರೆ ಕೊಡೋದು ಎಂಬ ಒಂದು ಕಾಲವಿತ್ತು. ಈಗ ಫಾಲೋ ಮಾಡೋದು, ತೊಂದರೆ ಕೊಡೋದು ಎಲ್ಲವೂ ಸೋಶಿಯಲ್‌ ಮೀಡಿಯಾ ಮೂಲಕ ಆಗುತ್ತಿದೆ. ಹೆಣ್ಣು ಮಕ್ಕಳು ಯಾರನ್ನೋ ಫ್ರೆಂಡ್‌ ಆಗಿ ಒಪ್ಪಿಕೊಳ್ಳುತ್ತಾರೆ. ಆ ನಂತರ ಫ್ರೆಂಡ್‌ಶಿಪ್‌ನ ಕಟ್‌ ಮಾಡೋಕೂ ಆಗಲ್ಲ, ಅನ್‌ಫ್ರೆಂಡ್‌ ಮಾಡೋಕೂ ಆಗಲ್ಲ. ಈ ತರಹ ವಿಪರೀತ ತೊಂದರೆಯಲ್ಲಿ ಕೆಲವು ಹೆಣ್ಮಕ್ಕಳು ಸಿಲುಕಿದ್ದಾರೆ. ಇದನ್ನು “ಸೈಬರ್‌ ಸ್ಟಾಕಿಂಗ್‌’ ಎನ್ನುತ್ತಾರೆ. ಕಂಪ್ಯೂಟರ್‌, ಮೊಬೈಲ್‌ ಮೂಲಕ ಸತತವಾಗಿ ಹುಡುಗಿಯರ ಮೇಲೆ ಕಣ್ಣಿಟ್ಟು ಅವರಿಗೆ ತೊಂದರೆ ಕೊಡುವ ಒಂದಷ್ಟು ಮಂದಿ ಇದ್ದಾರೆ. ಆ ತರಹದ ಕಥಾ ವಸ್ತುವನ್ನಿಟ್ಟುಕೊಂಡು ಹೆಣೆದಿರುವ ಕಥೆ 100′. ಈ ಹಿಂದೆ ಅನೇಕ ಫ್ಯಾಮಿಲಿ ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ, ನಟಿಸಿದ್ದೇನೆ. ಆದರೆ, ಮೊದಲ ಬಾರಿಗೆ ಫ್ಯಾಮಿಲಿ ಜೊತೆಗೆ ಒಂದು ಕ್ರೈಮ್‌ ಥ್ರಿಲ್ಲರ್‌ ಕಥೆಯನ್ನು ನಿಭಾಯಿಸಿದ್ದು ಈ ಸಿನಿಮಾ ನನಗೆ ಸವಾಲಾಗಿತ್ತು ರಮೇಶ್‌ ಅರವಿಂದ್‌ ಮಾತು.

ಈ ಚಿತ್ರವನ್ನು ರಮೇಶ್‌ ರೆಡ್ಡಿ ನಿರ್ಮಿಸಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಚಿತ್ರದಲ್ಲಿ ರಚಿತಾ ರಾಮ್‌, ಪೂರ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ.