ಸ್ವಾಮೀಜಿಗಳ ಹೆಗಲ ಮೇಲೆ ಕೈ ಫೋಟೋ, ಬಿಜೆಪಿಗೆ ಕಾಂಗ್ರೆಸ್‌ ಪಾಠ

ಸ್ವಾಮೀಜಿಗಳ ಹೆಗಲ ಮೇಲೆ ಕೈ ಫೋಟೋ, ಬಿಜೆಪಿಗೆ ಕಾಂಗ್ರೆಸ್‌ ಪಾಠ

ಬೆಂಗಳೂರು,  ; ಸ್ವಾಮೀಜಿಗಳ ಹೆಗಲ ಮೇಲೆ ಕೈ ಹಾಕುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ರಾಜ್ಯ ಕಾಂಗ್ರೆಸ್‌ ಆದಿಚುಂಚನಗಿರಿ ಶ್ರೀಗಳ ಹೆಗಲ ಮೇಲೆ ಕೈ ಇಟ್ಟಿರುವ ಕಂದಾಯ ಸಚಿವ ಆರ್‌.ಅಶೋಕ್ ಅವರ ಫೋಟೊ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಕಿಡಿ ಕಾರಿದೆ.

ಧರ್ಮ, ಸಂಸ್ಕೃತಿ ಕುರಿತು ಮಾತನಾಡುವ ಬಿಜೆಪಿ ನಾಯಕ, ಸಚಿವ ಆರ್‌.ಅಶೋಕ್‌ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳ ಹೆಗಲ ಮೇಲೆ ಕೈ ಹಾಕಿದ್ದಾರೆ. ಶ್ರೀಗಳು ಹೆಗಲ ಮೇಲೆ ಕೈಹಾಕುವಷ್ಟು ಸದರ ಎನಿಸಿದ್ದಾರೆಯೇ? ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಸ್ವಾಮೀಜಿ ಎಂದರೆ ಅವರಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ. ಹೀಗಿದ್ದರೂ ಒಬ್ಬರು ಶ್ರೀಗಳ ಮೇಲೆ ಕೈ ಹಾಕುವುದು ಎಷ್ಟು ಸರಿ. ಇದೇ ರೀತಿ ನೀವು ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯ ನಿಮಗಿದೆಯೇ? ಎಂದು ಕಾಂಗ್ರೆಸ್‌ ಆಕ್ರೋಶ ಹೊರಹಾಕಿದೆ.

ಒಬ್ಬ ಶ್ರೀಗಳ ಹೆಗಲ ಮೇಲೆ ಕೈ ಹಾಕುವ ಕರ್ನಾಟಕ ರಾಜ್ಯ ಬಿಜೆಪಿ ನಾಯಕರಿಗೆ, ಧರ್ಮ, ಸಂಸ್ಕೃತಿ ಬಗ್ಗೆ ಮಾತನಾಡುವ ಬಿಜೆಪಿಗರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ. ಈ ಕುರಿತು ಎರಡು ಫೋಟಗಳನ್ನು ತನ್ನ್ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ನಡೆದ ಘಟನೆ ಏನು?

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇದೇ ವೇಳೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ 108ಅಡಿ ಎತ್ತರ ಪ್ರಗತಿ ಪ್ರತಿಮೆಯನ್ನು ಪ್ರಧಾನಿಗಳು ಅನಾವರಣ ಮಾಡಿದರು. ನಂತರ ಪ್ರಧಾನಿಗಳು ಸೇರಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ ಚೆಂದ್ ಗೆಹ್ಲೋತ್, ಸಂಸದ ಮತ್ತು ನಟ ಜಗ್ಗೇಶ, ಸಚಿವರಾದ ಸುಧಾಕರ್, ಆರ್‌.ಅಶೋಕ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ಆದರೆ ಈ ವೇಳೆ ಫೋಟೋ ತೆಗೆಯುವಾಗ ಆರ್‌.ಅಶೋಕ ಅವರು ನಿರ್ಮಲಾನಂದನಾಥ ಸ್ವಾಮೀಜಿ ಅವರ ಹೆಗಲ ಮೇಲೆ ಕೈ ಇಟ್ಟಿದ್ದಾರೆ. ಅದು ಪೋಟೊದಲ್ಲಿ ಸೆರೆಯಾಗಿದ್ದು, ಕಾಂಗ್ರೆಸ್‌ ಆ ಪೋಟೊವನ್ನು ಟ್ವೀಟ್‌ನಲ್ಲಿ ಹಂಚಿಕೊಂಡು ಬಿಜೆಪಿಗೆ ಸಂಸ್ಕಾರದ ಪಾಠ ಮಾಡಿದೆ.