ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಕಾನ್ವೆ ಅರ್ಧಶತಕ; ನ್ಯೂಜಿಲೆಂಡ್‌ ಉತ್ತಮ ಆರಂಭ

ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಕಾನ್ವೆ ಅರ್ಧಶತಕ; ನ್ಯೂಜಿಲೆಂಡ್‌ ಉತ್ತಮ ಆರಂಭ

ವೆಲಿಂಗ್ಟನ್‌: ಡೆವೊನ್ ಕಾನ್ವೆ ಅವರ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡದವರು ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದಾರೆ.

ವೆಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟ ಮಳೆ ಹಾಗೂ ಮಂದ ಬೆಳಕಿನ ಕಾರಣ ಬೇಗನೇ ಕೊನೆಗೊಂಡಾಗ ಆತಿಥೇಯ ತಂಡ 48 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 155 ರನ್‌ ಗಳಿಸಿತ್ತು.

ಟಾಸ್‌ ಗೆದ್ದ ಲಂಕಾ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿತು. ಡೆವೊನ್ ಕಾನ್ವೆ (78) ಮತ್ತು ಟಾಮ್‌ ಲಥಾಮ್‌ (21) ಮೊದಲ ವಿಕೆಟ್‌ಗೆ 87 ರನ್‌ ಸೇರಿಸಿದರು. ಲಥಾಮ್‌ ವಿಕೆಟ್ ಪಡೆದ ಕಸುನ್‌ ರಜಿತಾ ಈ ಜತೆಯಾಟ ಮುರಿದರು.

ಶತಕದೆಡೆಗೆ ದಾಪುಗಾಲಿಟ್ಟಿದ್ದ ಕಾನ್ವೆ ಅವರು ಧನಂಜಯ ಡಿಸಿಲ್ವಗೆ ವಿಕೆಟ್‌ ಒಪ್ಪಿಸಿದರು. 108 ಎಸೆತಗಳನ್ನು ಎದುರಿಸಿದ ಅವರು 13 ಬೌಂಡರಿ ಹೊಡೆದರು.

ಶುಕ್ರವಾರದ ಆಟದ ಅಂತ್ಯಕ್ಕೆ ಕೇನ್‌ ವಿಲಿಯಮ್ಸನ್‌ ಮತ್ತು ಹೆನ್ರಿ ನಿಕೊಲ್ಸ್‌ ಕ್ರೀಸ್‌ನಲ್ಲಿದ್ದರು.

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್‌: 
48 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 155 (ಟಾಮ್‌ ಲಥಾಮ್ 21, ಡೆವೊನ್‌ ಕಾನ್ವೆ 78, ಕೇನ್‌ ವಿಲಿಯಮ್ಸನ್‌ ಬ್ಯಾಟಿಂಗ್‌ 26, ಹೆನ್ರಿ ನಿಕೊಲ್ಸ್‌ ಬ್ಯಾಟಿಂಗ್‌ 18, ಕಸುನ್‌ ರಜಿತಾ 42ಕ್ಕೆ 1, ಧನಂಜಯ ಡಿಸಿಲ್ವ 18ಕ್ಕೆ 1)