ವಿರಾಟ್ ಕೊಹ್ಲಿಗೆ ಬಾಬರ್ ಅಜಂಗಿಂತ 12 ಪಟ್ಟು ಹೆಚ್ಚು ಸಂಭಾವನೆ

ವಿರಾಟ್ ಕೊಹ್ಲಿಗೆ ಬಾಬರ್ ಅಜಂಗಿಂತ 12 ಪಟ್ಟು ಹೆಚ್ಚು ಸಂಭಾವನೆ

ಮೈದಾನವಿರಬಹುದು ಅಥವಾ ಮೈದಾನದ ಹೊರಗೆ ಇರಬಹುದು, ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ನಡುವೆ ಯಾವಾಗಲೂ ಹೋಲಿಕೆ ಮಾಡಲಾಗುತ್ತದೆ.

ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್‌ಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಂ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ.

ಇದರಲ್ಲಿ ಎರಡು ಮಾತಿಲ್ಲ. ಆದರೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರೇ ಹೇಳುವ ಪ್ರಕಾರ, ಬಾಬರ್ ಅಜಂಗಿಂತ ವಿರಾಟ್ ಕೊಹ್ಲಿ ಮುಂದೆ ನಿಲ್ಲುತ್ತಾರೆ ಎಂದು ಹೇಳುತ್ತಾರೆ. ಇದೀಗ ಇವರಿಬ್ಬರ ಸಂಭಾವನೆಯ ವಿಚಾರ ಎಲ್ಲೆಡೆ ಸದ್ದು ಮಾಡುತ್ತಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗೆ ಭಾರತ ಹಿರಿಯ ಪುರುಷರ ತಂಡಕ್ಕೆ ವಾರ್ಷಿಕ ಕೇಂದ್ರ ಒಪ್ಪಂದಗಳನ್ನು ನವೀಕರಣಗೊಳಿಸಿತು. ಇದು ಅನೇಕ ಕ್ರಿಕೆಟಿಗರಿಗೆ ಆರ್ಥಿಕ ಮತ್ತು ಔದ್ಯೋಗಿಕ ಭದ್ರತೆಯ ವಿಷಯದಲ್ಲಿ ಶುಭ ಸುದ್ದಿಯನ್ನು ನೀಡಿದೆ.

ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ವಾರ್ಷಿಕ ಕೇಂದ್ರ ಒಪ್ಪಂದದಲ್ಲಿ ಮೇಲ್ದರ್ಜೆಗೇರಿದರೆ, ಕೆಎಲ್ ರಾಹುಲ್ ಸೇರಿದಂತೆ ಕೆಲವು ಆಟಗಾರರು ಹಿಂಬಡ್ತಿ ಪಡೆದರು. ಇದೇ ವೇಳೆ ಸಂಜು ಸ್ಯಾಮ್ಸನ್, ಅರ್ಶ್‌ದೀಪ್ ಸಿಂಗ್ ಮತ್ತು ದೀಪಕ್ ಹೂಡಾ ಅವರಂತಹ ಹೊಸ ಆಟಗಾರರು ತಮ್ಮ ಚೊಚ್ಚಲ ವಾರ್ಷಿಕ ಬಿಸಿಸಿಐ ಒಪ್ಪಂದಕ್ಕೆ ಪ್ರವೇಶಿಸಿದರು.

ಈ ಮುನ್ನ ವಾರ್ಷಿಕ 5 ಕೋಟಿ ರೂ. ಸಂಭಾವನೆಯೊಂದಿಗೆ ಎ ಗ್ರೇಡ್‌ನಲ್ಲಿದ್ದ ರವೀಂದ್ರ ಜಡೇಜಾ, ಹೊಸ ಬಡ್ತಿಯಲ್ಲಿ ಎ ಪ್ಲಸ್ ಗ್ರೇಡ್‌ನೊಂದಿಗೆ ವಾರ್ಷಿಕ 7 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಈ ಗ್ರೇಡ್‌ನಲ್ಲಿ ಕಳೆದ ಎರಡು ವರ್ಷಗಳಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಮುಂದುವರೆದಿದ್ದಾರೆ.

ಸಿ ಗ್ರೇಡ್ ಆಟಗಾರರಾದ ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಅರ್ಶ್‌ದೀಪ್ ಸಿಂಗ್, ಇಶಾನ್ ಕಿಶನ್, ಕೆಎಸ್ ಭರತ್ ಮತ್ತು ಒಂದು ವರ್ಷದ ನಂತರ ವಾರ್ಷಿಕ ಒಪ್ಪಂದಕ್ಕೆ ಮರಳುತ್ತಿರುವ ಕುಲದೀಪ್ ಯಾದವ್ 1 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ.

ಕುತೂಹಲಕಾರಿ ಅಂವೆಂದರೆ, ಉನ್ನತ ಶ್ರೇಣಿಯ ಪಾಕಿಸ್ತಾನದ ಆಟಗಾರರು ಗಳಿಸುವುದಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಭಾರತೀಯ ಸಿ ಗ್ರೇಡ್ ಆಟಗಾರರು ಗಳಿಸುತ್ತಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಉನ್ನತ ಶ್ರೇಣಿಯಲ್ಲಿರುವ ಆಟಗಾರರು ತಿಂಗಳಿಗೆ ಪಾಕಿಸ್ತಾನಿ ರೂಪಾಯಿ ಲೆಕ್ಕದಲ್ಲಿ 1.25 ಮಿಲಿಯನ್ ಗಳಿಸುತ್ತಾರೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ವಾರ್ಷಿಕ 43.44 ಲಕ್ಷ ರೂ. ಪಡೆಯುತ್ತಾರೆ.

ಭಾರತದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಗಳಿಸುವುದಕ್ಕಿಂತ 12 ಪಟ್ಟು ಕಡಿಮೆಯಾಗಿದೆ ಮತ್ತು ಸಿ ಗ್ರೇಡ್‌ನಲ್ಲಿರುವ ಸಂಜು ಸ್ಯಾಮ್ಸನ್ ಗಳಿಸುವ ಅರ್ಧಕ್ಕಿಂತ ಕಡಿಮೆ. ಪಿಸಿಬಿಯ ವಾರ್ಷಿಕ ಸಂಭಾವನೆಯಲ್ಲಿ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್, ಹಸನ್ ಅಲಿ, ಶಾಹೀನ್ ಅಫ್ರಿದಿ ಮತ್ತು ಇಮಾಮ್-ಉಲ್-ಹಕ್ ಮಾತ್ರ ಉನ್ನತ ಶ್ರೇಣಿಯಲ್ಲಿದ್ದಾರೆ.

ಇನ್ನು ಭಾರತದ ವಾರ್ಷಿಕ ಒಪ್ಪಂದದಲ್ಲಿ ಕೆಲವು ಆಟಗಾರರಿಗೆ ಹಿನ್ನಡೆ ಉಂಟಾಗಿದೆ. ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಏಕದಿನ ಮತ್ತು ಟೆಸ್ಟ್‌ ಪಂದ್ಯಗಳಲ್ಲಿ ಉಪನಾಯಕನ ಸ್ಥಾನ ಕಳೆದುಕೊಂಡ ಕೆಎಲ್ ರಾಹುಲ್ 3 ಕೋಟಿ ರೂ. ಸಂಭಾವನೆಯೊಂದಿಗೆ ಎ ಗ್ರೇಡ್‌ನಿಂದ ಬಿ ಗ್ರೇಡ್‌ಗೆ ಹಿಂಬಡ್ತಿ ಪಡೆದಿದ್ದಾರೆ. ಇನ್ನು ಮೂರೂ ಸ್ವರೂಪದ ಕ್ರಿಕೆಟ್‌ನಲ್ಲಿ ಸ್ಥಾನ ಕಳೆದುಕೊಂಡಿರುವ ಶಿಖರ್ ಧವನ್ ಸಿ ಗ್ರೇಡ್‌ನಲ್ಲಿ ಉಳಿದಿದ್ದಾರೆ. ಶಾರ್ದೂಲ್ ಠಾಕೂರ್ ಕೂಡ ಬಿ ಗ್ರೇಡ್‌ನಿಂದ ಸಿ ಗ್ರೇಡ್‌ಗೆ ಹಿಂಬಡ್ತಿ ಹೊಂದಿದ್ದಾರೆ.

ಅಂತಿಮವಾಗಿ, ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಬಿಸಿಸಿಐ ವಾರ್ಷಿಕ ಕೇಂದ್ರ ಒಪ್ಪಂದಗಳಲ್ಲಿ ಮುಂಬಡ್ತಿ ನೀಡಲಾಗುತ್ತದೆ ಮತ್ತು ಕಳಪೆ ಪ್ರದರ್ಶನಕಾರರಿಗೆ ಹಿಂಬಡ್ತಿ ಮೂಲಕ ಪ್ರತಿಭೆ ಆಧಾರಿತ ಮನ್ನಣೆ ನೀಡಲಾಗುವುದು ಎನ್ನುವುದನ್ನು ಬಿಸಿಸಿಐ ತೋರಿಸಿದೆ. ಉತ್ತಮ ಪ್ರದರ್ಶನ ನೀಡಿ ಉತ್ತಮ ಸಂಭಾವನೆ ಪಡೆದುಕೊಳ್ಳಿ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದೆ.