ಮೈಸೂರು: ಕೆಎಸ್ಐಸಿಗೆ 31 ಕೋಟಿ ಲಾಭ- ಸಚಿವ ಡಾ.ನಾರಾಯಣ ಗೌಡ
ಮೈಸೂರು: ಕೋವಿಡ್ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಕೆಎಸ್ಐಸಿ (ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್) ಈ ವರ್ಷ 31 ಕೋಟಿ ರೂ.ಗಳ ಲಾಭ ಗಳಿಸಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣ ಗೌಡ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್ಐಸಿ 2021-2022ನೇ ಹಣಕಾಸು ವರ್ಷದಲ್ಲಿ 204.77 ಕೋಟಿ ರೂ.ಗಳ ವಹಿವಾಟು ನಡೆಸಿದ್ದು, 31.64 ಕೋಟಿ ರೂ.ಗಳ ಲಾಭ ಗಳಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಸುಮಾರು 153.59 ಕೋಟಿ ವಹಿವಾಟು ನಡೆಸುವ ಮೂಲಕ 27.72 ಕೋಟಿ ಲಾಭ ಗಳಿಸಿತ್ತು ಎಂದರು.
ಕಳೆದ ವರ್ಷಕ್ಕೆ ಹೋಲಿಸಿದರೆ 50 ಕೋಟಿ ವಹಿವಾಟು ಹೆಚ್ಚಳ: ಮೈಸೂರು ರೇಷ್ಮೆ ಸೀರೆ ತನ್ನದೇ ಆದ ಬ್ರಾಂಡ್ ಹೊಂದಿದೆ. ಮೈಸೂರು ರೇಷ್ಮೆಗೆ ದೇಶ ಮತ್ತು ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆವಿಷ್ಕಾರ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದಾಗಿ ಕೆಎಸ್ಐಸಿ ಪ್ರತಿವರ್ಷ ಆದಾಯದಲ್ಲಿ ಹೆಚ್ಚಳವನ್ನು ಕಾಣುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 50 ಕೋಟಿಗೂ ಅಧಿಕ ವಹಿವಾಟು ನಡೆದಿದೆ. ನಿಗಮದಲ್ಲಿ ಹೆಚ್ಚು ಸುಧಾರಿತ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಬೇಡಿಕೆ ಆಧಾರಿತ ವಿನ್ಯಾಸಗಳ ಆಧಾರದ ಮೇಲೆ ಸೀರೆಗಳನ್ನು ಉತ್ಪಾದಿಸುವುದು ಇದರ ಉದ್ದೇಶವಾಗಿದೆ. ಈ ಮೂಲಕ ಕೆಎಸ್ಐಸಿಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಉದ್ದೇಶಿಸಲಾಗಿದೆ ಎಂದು ಸಚಿವ ಡಾ.ನಾರಾಯಣ ಗೌಡ ಮಾಹಿತಿ ನೀಡಿದರು.
ರೇಷ್ಮೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯವಾಗದಂತೆ ಇ-ತೂಕ ಮತ್ತು ಇ-ಪಾವತಿಯನ್ನು ಜಾರಿಗೆ ತರಲಾಗಿದೆ. ಕಚ್ಚಾ ರೇಷ್ಮೆ ಮತ್ತು ರೇಷ್ಮೆ ನೂಲಿನ ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ರೇಷ್ಮೆ ಸೀರೆ ಉತ್ಪಾದನೆಯಲ್ಲೂ ಹೊಸ ವಿನ್ಯಾಸವನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಇದಲ್ಲದೆ, ಮಾರಾಟವನ್ನು ಹೆಚ್ಚಿಸಲು ದಂಪತಿ ಪ್ಯಾಕೇಜ್ ಸೇರಿದಂತೆ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಮೂಲಕ ರೇಷ್ಮೆ ಇಲಾಖೆ ಮತ್ತು ಕೆಎಸ್ಐಸಿ ನಿಗಮವನ್ನು ಮತ್ತಷ್ಟು ಪ್ರಗತಿಗೆ ಕೊಂಡೊಯ್ಯಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು.