ಲಾಡ್ಜ್ನಲ್ಲಿ ಯುವತಿ ಹತ್ಯೆ; ಪ್ರಿಯಕರನ ಕೈವಾಡ ಶಂಕೆ..!
ಹೈದರಾಬಾದ್: ಲಾಡ್ಜ್ನಲ್ಲಿ ಯುವತಿಯೊಬ್ಬಳ ಹತ್ಯೆಯಾಗಿರುವ ಘಟನೆ ಹೈದರಾಬಾದ್ನ ಚಂದಾನಗರದಲ್ಲಿ ನಡೆದಿದೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡುತ್ತಿದ್ದು, ಯುವತಿಯದ್ದು ಕೊಲೆ ಎಂಬುದನ್ನು ದೃಢಪಡಿಸಿದ್ದಾರೆ.
ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಗೆ ಸೇರಿದ ಯುವತಿಯೊಬ್ಬಳು ಇದೇ 23 ರಂದು ಓಂಗೋಲು ನಿವಾಸಿ ಕೋಟಿರೆಡ್ಡಿ ಎಂಬುವವರ ಜತೆ ಚಂದಾನಗರದ ಲಾಡ್ಜ್ಗೆ ಹೋಗಿದ್ದಳು. ಬೆಳಗ್ಗೆ ಕೊಠಡಿ ಬಾಗಿಲು ತೆರೆಯದ ಕಾರಣ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ತೆರೆದು ನೋಡಿದಾಗ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಕೋಟಿರೆಡ್ಡಿ ಯುವತಿಯನ್ನು ಕೊಂದು ಲಾಡ್ಜ್ ಕೋಣೆಗೆ ಬೀಗ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಮಾಡಿರುವ ಆರೋಪಿ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಯಗೊಂಡಿದ್ದ ಆತ ಆಸ್ಪತ್ರೆ ಸೇರಿದ್ದಾನೆ. ತಾನು ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದೇನೆ, ಹಿರಿಯರು ಒಪ್ಪಿಕೊಳ್ಳದಿದ್ದಾಗ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೇನೆ ಎಂದು ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದ್ದಾನೆ. ಆಸ್ಪತ್ರೆ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ನಡೆಸಿರುವ ಚಂದಾನಗರ ಪೊಲೀಸರು ಆರೋಪಿ ಕೋಟಿರೆಡ್ಡಿಯನ್ನು ಬಂಧಿಸಿದ್ದಾರೆ.
ಆರೋಪಿ ಕೋಟಿ ರೆಡ್ಡಿ ಜೊತೆ ಯುವತಿಗೆ ಹಲವು ವರ್ಷಗಳಿಂದ ಪರಿಚಯವಿತ್ತು. ನರ್ಸಿಂಗ್ ಓದುತ್ತಿದ್ದಾಗ ಮೆಡಿಕಲ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಈತನ ಪರಿಚಯವಾಗಿದೆ. ಇಬ್ಬರು ಪ್ರೀತಿಸುತ್ತಿದ್ದರು. ಮದುವೆಯಾಗಲು ನಿರ್ಧರಸಿದ್ದರು ಎಂದು ಮೃತಳ ಕುಟುಂಬಸ್ಥರು ತಿಳಿಸಿದ್ದಾರೆ.
ಯುವತಿ ಆರು ತಿಂಗಳು ಹೈದರಾಬಾದ್ನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಆಕೆ ಮೃತಪಟ್ಟಿರುವುದರಿಂದ ಹಲವು ಅನುಮಾನುಗಳು ವ್ಯಕ್ತಪಡಿಸಿರುವ ಕುಟುಂಬಸ್ಥರು, ತಮಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.