ರಾಜಸ್ಥಾನ್‌ ರಾಯಲ್ಸ್‌ಗೆ ನಾಳೆ ಪಂಜಾಬ್ ಎದುರಾಳಿ, ಪಿಚ್ ರಿಪೋರ್ಟ್, ಹವಾಮಾನ ವರದಿ

ರಾಜಸ್ಥಾನ್‌ ರಾಯಲ್ಸ್‌ಗೆ ನಾಳೆ ಪಂಜಾಬ್ ಎದುರಾಳಿ, ಪಿಚ್ ರಿಪೋರ್ಟ್, ಹವಾಮಾನ ವರದಿ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬುಧವಾರ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಮುಖಾಮುಖಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿರುವ ರಾಜಸ್ಥಾನ್ ರಾಯಲ್ಸ್ ತಂಡ ಈ ಟೂರ್ನಿಯಲ್ಲಿ ಅಬ್ಬರಿಸುವ ಸೂಚನೆ ನೀಡಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಂಡ ಕೂಡ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸಿದ್ದು ಆತ್ಮವಿಶ್ವಾಸದಲ್ಲಿದೆ.

ಹೀಗಾಗಿ ಗೆದ್ದವರ ನಡುವಿನ ಈ ಕದನ ಕುತೂಹಲ ಮೂಡಿಸಿದೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅಕ್ಷರಶಃ ಆರ್ಭಟಿಸಿತ್ತು. ಬ್ಯಾಟಿಂಗ್‌ನಲ್ಲಿ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ನಲ್ಲಿ ರನ್ ಮಳೆ ಹರಿಸಿದರೆ ಬೌಲಿಂಗ್‌ನಲ್ಲಿ ಟ್ರೆಂಟ್ ಬೋಲ್ಟ್, ಯುಜುವೇಂದ್ರ ಚಾಹಲ್ ಹಾಗೂ ಆರ್ ಅಶ್ವಿನ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಳೆದ ಆವೃತ್ತಿಯಲ್ಲಿಯೂ ಈ ಆರು ಆಟಗಾರರ ಅದ್ಭುತ ಪ್ರದರ್ಶನದಿಂದಾಗಿಯೇ ಆರ್‌ಆರ್ ತಂಡ ಫೈನಲ್ ಹಂತಕ್ಕೆ ಪ್ರವೇಶ ಪಡೆದಿತ್ತು ಎಂಬುದು ಗಮನಾರ್ಹ ಅಂಶ.

ಪಂದ್ಯದ ಮಾಹಿತಿ: ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಈ ಟೂರ್ನಿಯ 8ನೇ ಪಂದ್ಯವಾಗಿರಲಿದೆ. ಏಪ್ರಿಲ್ 5 ಬುಧವಾರದಂದು ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಹಾಗೂ ಜಿಯೋ ಸಿನಿಮಾದಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಪಿಚ್ ರಿಪೋರ್ಟ್ ಹೀಗಿದೆ: ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜನೆಯಾಗಲಿದ್ದು ಇಲ್ಲಿನ ಪಿಚ್ ಬ್ಯಾಟರ್‌ಗಳಿಗೆ ಹಾಗೂ ಬೌಲರ್‌ಗಳಿಗೆ ಸ್ಪರ್ಧಾತ್ಮಕವಾಗಿರಲಿದೆ. ಆದರೆ ಈ ಮೈದಾನದಲ್ಲಿ ಟಾಸ್ ಗೆದ್ದ ತಂಡ ರನ್ ಬೆನ್ನಟ್ಟುವುದನ್ನು ಆಯ್ಕೆ ಮಾಡಿದರೆ ಉತ್ತಮ. ಮೊದಲ ಇನ್ನಿಂಗ್ಸ್‌ನಲ್ಲಿ ಈ ಮೈದಾನದ ಸರಾಸರಿ ಸ್ಕೋರ್ 170 ಆಗಿದೆ.

ಇತ್ತಂಡಗಳ ಸಂಭಾವ್ಯ ಆಡುವ ಬಳಗ

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಜೇಸನ್ ಹೋಲ್ಡರ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಚಾಹಲ್, ಬೌಲ್ಟ್, ನವದೀಪ್ ಸೈನಿ

ಇಂಪ್ಯಾಕ್ಟ್ ಪ್ಲೇಯರ್: ಕೆಎಂ ಆಸಿಫ್

ಪಂಜಾಬ್ ಕಿಂಗ್ಸ್: ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್, ಭಾನುಕಾ ರಾಜಪಕ್ಷೆ, ಜಿತೇಶ್ ಶರ್ಮಾ, ಸಿಕಂದರ್ ರಾಜಾ, ಸ್ಯಾಮ್ ಕರನ್, ಶಾರುಖ್ ಖಾನ್, ನಾಥನ್ ಎಲ್ಲಿಸ್, ಹರ್ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಶ್ದೀಪ್ ಸಿಂಗ್

ಇಂಪಾಕ್ಟ್ ಪ್ಲೇಯರ್: ರಿಷಿ ಧವನ್