ಮದುವೆ ಆಮಿಷವೊಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ: ಬೆಂಗಳೂರಲ್ಲಿ ಸಬ್​ಇನ್​ಸ್ಪೆಕ್ಟರ್​ ಬಂಧನ

ಮದುವೆ ಆಮಿಷವೊಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ: ಬೆಂಗಳೂರಲ್ಲಿ ಸಬ್​ಇನ್​ಸ್ಪೆಕ್ಟರ್​ ಬಂಧನ

ಬೆಂಗಳೂರು: ಮದುವೆ ಆಗುವುದಾಗಿ ಆಮಿಷವೊಡ್ಡಿ ಕಲಬುರಗಿಯಿಂದ ಬೆಂಗಳೂರಿಗೆ ಕರೆಸಿಕೊಂಡು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಡಿಟೆಕ್ಟಿವ್​ ಸಬ್​ಇನ್​ಸ್ಪೆಕ್ಟರ್​​ನನ್ನು ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಿಐಡಿ ಘಟಕದಲ್ಲಿ ಇರುವ ಡಿಟೆಕ್ಟಿವ್​ ಸಬ್​ಇನ್​ಸ್ಪೆಕ್ಟರ್​ ಬಂಧಿತ. 545 ಪಿಎಸ್​ಐ ಹುದ್ದೆ ನೇಮಕಾತಿಯ ಲಿಖಿತ ಪರೀಕ್ಷೆ ಕರ್ತವ್ಯದ ಮೇಲೆ ಸಬ್​ಇನ್​ಸ್ಪೆಕ್ಟರ್​, ಬೆಂಗಳೂರಿಂದ ಕಲಬುರಗಿಗೆ ಹೋಗಿದ್ದಾಗ ಯುವತಿಯೊಬ್ಬಳ ಪರಿಚಯವಾಗಿದೆ. ಇಬ್ಬರ ನಡುವೆ ಆತ್ಮೀಯತೆ ಬೆಳೆದು ಆಕೆಯನ್ನು ಬೆಂಗಳೂರಿಗೆ ಕರೆಸಿಕೊಂಡ ಸಬ್​ಇನ್​ಸ್ಪೆಕ್ಟರ್​, ದಕ್ಷಿಣ ವಿಭಾಗ ವ್ಯಾಪ್ತಿಯ ಖಾಸಗಿ ಹೋಟೆಲ್​ನಲ್ಲಿ ಏಕಾಂತವಾಗಿ ಉಳಿದುಕೊಂಡಿದ್ದರು. ಇದಾದ ಮೇಲೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಮದುವೆ ಆಗುವಂತೆ ಯುವತಿ ಒತ್ತಾಯ ಮಾಡಿದಾಗ ಸಬ್​ಇನ್​ಸ್ಪೆಕ್ಟರ್​ ನಿರಾಕರಿಸಿದ್ದಾರೆ.

ನೊಂದ ಯುವತಿ, ಹಿರಿಯ ಪೊಲೀಸ್​ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಮಹಿಳಾ ಪೊಲೀಸ್​ ಠಾಣೆಗೆ ದೂರು ನೀಡುವಂತೆ ತಿಳಿಸಿ, ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇದರ ಮೇರೆಗೆ ಎಫ್​​ಐಆರ್​ ದಾಖಲಿಸಿದ ಬಸವನಗುಡಿ ಮಹಿಳಾ ಠಾಣೆ ಪೊಲೀಸರು, ಸಿಐಡಿ ಆವರಣದಲ್ಲಿ ಕರ್ತವ್ಯದಲ್ಲಿದ್ದ ಡಿಟೆಕ್ಟಿವ್​ ಸಬ್​ಇನ್​ಸ್ಪೆಕ್ಟರ್​ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.