ಪೋಷಕರೇ ಎಚ್ಚರ.! ವಿಜಯಪುರದಲ್ಲಿ ಕಂದಮ್ಮಗಳಿಗೆ ದಡಾರ ರೋಗ ಹೆಚ್ಚಳ: ಜಿಲ್ಲಾಡಳಿತ ಎಚ್ಚರಿಕೆ
ವಿಜಯಪುರ : ದಡಾರ ಮಕ್ಕಳನ್ನು ಕಾಡುವ ತೀವ್ರ ಸ್ವರೂಪ ಸಾಂಕ್ರಾಮಿಕ ರೋಗ. ಮೊದಮೊದಲು ಇದರ ಹಾವಳಿ ಪ್ರಪಂಚದ ಪ್ರತಿಯೊಂದು ದೇಶದಲ್ಲಿತ್ತು. ಇದೀಗ ಕರ್ನಾಟಕದಲ್ಲಿ ಮೊದಲ ಬಾರಿಗೆ ಒಂದೇ ಗ್ರಾಮದಲ್ಲಿ ಅತೀ ಹೆಚ್ಚು ದಡಾರ ಸೋಂಕು ಪತ್ತೆಯಾಗಿದೆ.
ಅದರಲ್ಲೂ ವಿಜಯಪುರದ ಆಲಮೇಲ ತಾಲೂಕಿನ ನೂರಾರು ಮಕ್ಕಳಿಗೆ ದಡಾರ ಸೋಂಕು ಕಾಣಿಸಿಕೊಂಡಿದೆ. ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಈಗಾಗಲೇ ಆಲಮೇಲ ತಾಲೂಕ ಕೇಂದ್ರಲ್ಲಿ ಎರಡುನೂರಕ್ಕೂ ಹೆಚ್ಚಿನ ಮಕ್ಕಳಲ್ಲಿ ದಡಾರ ಮತ್ತು ರುಬೆಲ ಸಾಂಕ್ರಾಮಿಕ ಕಾಯಿಲೆ ದೃಡಪಟ್ಟಿದೆ.
ನ್ನೂರಕ್ಕೂ ಹೆಚ್ಚು ಮಕ್ಕಳು ದಡಾರದಿಂದ ಬಳಲುತ್ತಿರುವುದು ಕಂಡುಬಂದಿದೆ.ಸ್ಥಳೀಯ ಆರೋಗ್ಯ ಅಧಿಕಾರಿಗಳು ಪೋಷಕರಲ್ಲಿ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ
ಈಗಾಗಲೇ ವಿಜಯಪುರದ ಜಿಲ್ಲೆಯಲ್ಲಿ ದಡಾರ ಹೆಚ್ಚಿನ ರೋಗಲಕ್ಷಣದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮುನ್ನೆಚ್ಚರಿಕೆ ನಿಟ್ಟಿನಲ್ಲಿ ಇಂಡಿ ಕಂದಾಯ ಉಪ ವಿಭಾಗ ಅಧಿಕಾರಿ ನೇತೃತ್ವದಲ್ಲಿ ಗುರುವಾರ ಸಂಜೆ ಆರೋಗ್ಯ ಇಲಾಖೆ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಶುಕ್ರವಾರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಶನಿವಾರದಿಂದ ಲಸಿಕಾ ಅಭಿಯಾನ ಹಮ್ಮಿಕೊಳ್ಳುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಡಾರ ಕಾಯಿಲೆಯ ಲಕ್ಷಣಗಳು
ದಡಾರ ಚಿಕ್ಕ ಮಕ್ಕಳಿಗೆ ತುಂಬಾ ಅಪಾಯಕಾರಿ ಸೋಂಕು ಆಗಿದೆ. ಸೋಂಕು ತಗುಲಿದ ನಂತರ 7 ರಿಂದ 14 ದಿನಗಳಲ್ಲಿ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ 104 ಡಿಗ್ರಿ ವರೆಗೆ ಅಧಿಕ ಜ್ವರ, ಕೆಮ್ಮು, ಸೋರುವ ಮೂಗು, ಕೆಂಪು ಕಣ್ಣು, ಅಥವಾ ನೀರು ತುಂಬಿದ ಕಣ್ಣುಗಳು.
ದಡಾರ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ನಂತರ ಸೋಂಕಿತ ಮಗುವಿನಲ್ಲಿ 2 ರಿಂದ 3 ದಿನಗಳ ನಂತರ, ಬಾಯಿಯೊಳಗೆ ಸಣ್ಣ ಬಿಳಿ ಚುಕ್ಕೆಗಳು ಬೆಳೆಯುತ್ತವೆ . ಕೆಂಪು-ಫ್ಲಾಟ್ ರಾಶ್ 3 ರಿಂದ 5 ದಿನಗಳಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಮಗುವಿನ ಮುಖ, ಕುತ್ತಿಗೆ, ತೋಳು, ಕಾಲುಗಳು ಮತ್ತು ಅಡಿಭಾಗದ ಮೇಲೆ ದಡಾರ ರಾಶಸ್ ಉಂಟಾಗುತ್ತದೆ.
ದಡಾರ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ
ದಡಾರ ಕಾಯಿಲೆ ತಡೆಗಟ್ಟುವ ಏಕೈಕ ಮಾರ್ಗವೆಂದರೆ ಲಸಿಕೆ ಹಾಕುವುದು. ದಡಾರದಿಂದ ಮಕ್ಕಳನ್ನು ರಕ್ಷಿಸಲು, ಅವರಿಗೆ 2 ಬಾರಿ ದಡಾರ ಲಸಿಕೆ ನೀಡಲಾಗುತ್ತದೆ. ಏಕೆಂದರೆ ದಡಾರಕ್ಕೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಹಾಗಾಗಿ ದಡಾರ ಸಂಭವಿಸಿದ ನಂತರ ಅದರ ರೋಗಲಕ್ಷಣಗಳನ್ನು ನಿಯಂತ್ರಿಸಲು ಮಾತ್ರ ಸಾಧ್ಯ.
ದಡಾರ ಬಂದರೆ ಏನು ಮಾಡಬೇಕು?
ಮಗುವಿಗೆ ದಡಾರ ರೋಗ ನಿರ್ಣಯವಾದ ನಂತರ ವಿಶ್ರಾಂತಿ ನೀಡುವುದು, ಮಗುವನ್ನು ಇತರೆ ಮಕ್ಕಳಿಂದ ಪ್ರತ್ಯೇಕಿಸುವುದು, ಆಗಾಗ ನೀರು ಮತ್ತು ಜ್ಯೂಸ್ ಕುಡಿಸುವುದು, ಒದ್ದೆ ಹತ್ತಿಯಿಂದ ಮಗುವಿ ದೇಹ ಸ್ವಚ್ಛಗೊಳಿಸುವುದು, ವೈದ್ಯರ ಸಲಹೆ ಮೇರೆಗೆ ಜ್ವರದ ಔಷಧ ನೀಡುವುದು, ಶುಚಿತ್ವ ಕಾಪಾಡುವುದು. ಮಗುವನ್ನು ಮುಟ್ಟುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯುವುದು. ದಡಾರ ಕಾಯಿಲೆ ಇದೊಂದು ವೇಗವಾಗಿ ಹರಡುವ ಸೋಂಕು. ಇದು ಪ್ಯಾರಾಮಿಕ್ಸೊವೈರಸ್ ಕುಟುಂಬದ ವೈರಸ್ ನಿಂದ ಉಂಟಾಗುತ್ತದೆ. ಈ ವೈರಸ್ ಮೊದಲು ಉಸಿರಾಟದ ಪ್ರದೇಶಕ್ಕೆ ಧಕ್ಕೆ ಮಾಡುತ್ತದೆ. ನಂತರ ಕೆಮ್ಮು ಅಥವಾ ಶೀತ ಅಥವಾ ನೇರ ಸ್ಪರ್ಶದಿಂದ ಆರೋಗ್ಯವಂತ ಜನರಿಗೆ ಸೋಂಕು ತಗುಲುತ್ತದೆ