ಪಾಕಿಸ್ತಾನಕ್ಕೆ ಏಷ್ಯಾಕಪ್ ಆತಿಥ್ಯ; ಭಾರತ ತಂಡ ನೆರೆ ದೇಶಕ್ಕೆ ಪ್ರಯಾಣಿಸುತ್ತದೆಯೇ?; ಇಲ್ಲಿದೆ ಮಾಹಿತಿ
2023ರ ಏಕದಿನ ಏಷ್ಯಾ ಕಪ್ ಆತಿಥ್ಯ ಮತ್ತು ಭಾರತ ತಂಡದ ಪ್ರಯಾಣದ ಬಗ್ಗೆ ಕಗ್ಗಂಟಾಗಿದ್ದ ವಿಷಯ ಇದೀಗ ಅಂತಿಮ ಘಟ್ಟ ತಲುಪಿದ್ದು, ಸಂಧಾನದ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿವೆ.
2023ರ ಏಕದಿನ ಏಷ್ಯಾ ಕಪ್ ಪಂದ್ಯಾವಳಿಗೆ ಪಾಕಿಸ್ತಾನ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಆದರೆ ಭಾರತ ತಂಡವು ತಮ್ಮ ಪಂದ್ಯಗಳನ್ನು 'ತಟಸ್ಥ' ಸ್ಥಳದಲ್ಲಿ ಆಡಲಿದೆ. ಈ ಕುರಿತು ಬಿಸಿಸಿಐ ಮತ್ತು ಪಿಸಿಬಿ ತ್ವರಿತವಾಗಿ ರಾಜಿ ಮಾಡಿಕೊಳ್ಳಲು ನಿರ್ಧರಿಸಿವೆ.
ಭಾರತ ತಂಡ ತನ್ನ ಎಲ್ಲ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಿದ್ದರೆ, ಭಾರತ ವಿರುದ್ಧದ ಪಂದ್ಯಗಳನ್ನು ಸಹ ಪಾಕಿಸ್ತಾನ ತಟಸ್ಥ ಸ್ಥಳದಲ್ಲೇ ಎದುರಿಸುವ ಸಾಧ್ಯತೆ ಇದೆ. ಭಾರತ ತಂಡ ತನ್ನ 2023ರ ಏಷ್ಯಾ ಕಪ್ ಪಂದ್ಯಗಳನ್ನು ಇಂಗ್ಲೆಂಡ್, ಓಮನ್, ಶ್ರೀಲಂಕಾ ಅಥವಾ ಯುಎಇ ಆಯ್ಕೆ ಮಾಡುವ ಸಾಧ್ಯತೆ ಇದೆ.
"ಕೆಲವು ದಿನಗಳ ಹಿಂದೆ ಏಷ್ಯನ್ ಕ್ರಿಕೆಟ್ ಸಮಿತಿ (ಎಸಿಸಿ)ಯ ಮಂಡಳಿಗಳ ಸಭೆ ನಡೆಸಲಾಗಿತ್ತು. ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ನಡೆಸಲು ಅನುಮತಿಸಲಾಗುವುದು. ಆದರೆ, ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸದೇ ತಮ್ಮ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುತ್ತದೆ. ಭಾರತ ತಮ್ಮ ಪಂದ್ಯಗಳನ್ನು ಓಮನ್, ಯುಎಇ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಆಡುವ ಸಾಧ್ಯತೆಯಿದೆ. ಇದನ್ನು ನಂತರ ನಿರ್ಧರಿಸಲಾಗುವುದು," ಎಂದು ಎಎನ್‌ಐ ವರದಿ ಮಾಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಎರಡು ಪಂದ್ಯಗಳನ್ನು ಒಳಗೊಂಡಂತೆ ಭಾರತದ ಉಳಿದ ಪಂದ್ಯಗಳನ್ನು ಆಯೋಜಿಸಲು ಯುಎಇ, ಓಮನ್, ಶ್ರೀಲಂಕಾ ಮತ್ತು ಇಂಗ್ಲೆಂಡ್ ಸಮರ್ಥವಾಗಿದ್ದರೂ ತಟಸ್ಥ ಸ್ಥಳವನ್ನು ಇನ್ನೂ ನಿರ್ಧರಿಸಬೇಕಿದೆ. ಒಂದು ವೇಳೆ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಫೈನಲ್ ತಲುಪಿದರೆ, ಆ ಪಂದ್ಯವನ್ನು ತಟಸ್ಥ ಸ್ಥಳದಲ್ಲಿಯೇ ಆಡಲಾಗುತ್ತದೆ.
ಈ ವರ್ಷದ ಸೆಪ್ಟೆಂಬರ್ ಮೊದಲ ವಾರದಲ್ಲಿ ಏಕದಿನ ಮಾದರಿಯಲ್ಲಿ ನಡೆಯಲಿರುವ ಆರು ರಾಷ್ಟ್ರಗಳ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಇತರ ಗುಂಪಿನ ಭಾಗವಾಗಿದೆ. ಆರನೇ ತಂಡದ ಸ್ಥಾನಕ್ಕೆ ಸಿಂಗಾಪುರ, ಕುವೈತ್, ಹಾಂಗ್ ಕಾಂಗ್ ಮತ್ತು ಯುಎಇ ನಡುವೆ ಸ್ಪರ್ಧೆ ಇರಲಿದೆ.
2023ರ ಏಷ್ಯಾ ಕಪ್ 13 ದಿನಗಳ ಅವಧಿಯಲ್ಲಿ ಫೈನಲ್ ಪಂದ್ಯ ಸೇರಿ ಒಟ್ಟು 13 ಪಂದ್ಯಗಳನ್ನು ಆಡಲಾಗುತ್ತದೆ. ಮೂರು ತಂಡಗಳ ಎರಡು ಗುಂಪು ರಚನೆಯಾಗಲಿದ್ದು, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 4ಗೆ ಮುನ್ನಡೆ ಪಡೆಯುತ್ತವೆ. ನಂತರ ಅಲ್ಲಿ ಅಲ್ಲಿ ಗೆದ್ದ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಸೆಣಸಾಡಲಿವೆ.
ಈ ಮೊದಲು ಬಹ್ರೇನ್‌ನಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆ ಯಾವುದೇ ನಿರ್ಣಯವಿಲ್ಲದೆ ಮುಕ್ತಾಯಗೊಂಡ ನಂತರ, ಎಸಿಸಿ ಸದಸ್ಯರು ದುಬೈನಲ್ಲಿ ಎರಡು ಸುತ್ತಿನ ಅನೌಪಚಾರಿಕ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಬಿಸಿಸಿಐ ಪ್ರತಿನಿಧಿಗಳಾಗಿ ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭಾಗವಹಿಸಿದ್ದರು. 2023ರ ಏಷ್ಯಾ ಕಪ್‌ಗೆ ಆತಿಥ್ಯ ವಹಿಸಲಿರುವ ಪಾಕಿಸ್ತಾನವನ್ನು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಪ್ರತಿನಿಧಿಸಿದ್ದರು.
2023ರ ಏಷ್ಯಾ ಕಪ್ ಪಂದ್ಯಾವಳಿಯನ್ನು 'ತಟಸ್ಥ' ಸ್ಥಳದಲ್ಲಿ ಆಯೋಜಿಸಲಾಗುವುದು ಎಂದು ಕಳೆದ ಅಕ್ಟೋಬರ್‌ನಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಗೆ ಪಾಕಿಸ್ತಾನ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಂದಿನ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಯೋಜಿಸದಿದ್ದರೆ, ತಾವು ಏಕದಿನ ವಿಶ್ವಕಪ್ ಪಂದ್ಯಾವಳಿಯಿಂದ ಹಿಂದೆ ಸರಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸುವ ತಟಸ್ಥ ದೇಶವು ಸಹ-ಆತಿಥ್ಯ ವಹಿಸುವ ಪ್ರಸ್ತಾಪವನ್ನು ಎಸಿಸಿ ಸಭೆಯಲ್ಲಿ ಮಂಡಿಸಲಾಯಿತು ಮತ್ತು ಅದಕ್ಕೆ ಸಮ್ಮತಿ ಸೂಚಿಸಲಾಯಿತು.