ಕೋವಿಡ್ ಹೊಸ ತಳಿಗೆ 'ಮೋದಿ ತಳಿ' ಎಂದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗುಡುಗು

ನವದೆಹಲಿ: 'ಕಾಂಗ್ರೆಸ್‌ ಪಕ್ಷವು ಕೋವಿಡ್ ಹೊಸ ತಳಿಯನ್ನು 'ಇಂಡಿಯಾ ತಳಿ' ಮತ್ತು 'ಮೋದಿ ತಳಿ' ಎಂದು ಕರೆಯುವ ಮೂಲಕ ‌ಭಾರತ ಮತ್ತು ಪ್ರಧಾನಿ ಮೋದಿ ಅವರ ಹೆಸರಿಗೆ ಕಳಂಕ ತರಲು ಪ್ರಯತ್ನಿಸುತ್ತಿದೆ' ಎಂದು ಬಿಜೆಪಿ ಮಂಗಳವಾರ ವಾಗ್ದಾಳಿ ನಡೆಸಿದೆ. 'ತಮ್ಮ ಪಕ್ಷದ ಪ್ರಚಾರಕ್ಕಾಗಿ ಕಾಂಗ್ರೆಸ್‌ ಪಕ್ಷವು ಸಾಂಕ್ರಾಮಿಕದ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುತ್ತಿದೆ. ಇದಕ್ಕಾಗಿ ಪಕ್ಷವು ಪತ್ರಕರ್ತ ಸ್ನೇಹಿತರ ಸಹಾಯ ಪಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್‌ ಹೊಸ ತಳಿಯನ್ನು 'ಇಂಡಿಯಾ' ಮತ್ತು 'ಮೋದಿ ತಳಿ' ಎಂಬುದಾಗಿ ಕರೆಯುವಂತೆ ಪಕ್ಷವು ಕಾರ್ಯಕರ್ತರಿಗೆ ಸೂಚಿಸಿದೆ' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ದೂರಿದ್ದಾರೆ. 'ಕೋವಿಡ್‌ ಹೊಸ ತಳಿಗೆ ಭಾರತದ ಹೆಸರು ನೀಡಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೂ ಕಾಂಗ್ರೆಸ್‌ ಪಕ್ಷವು ಈ ಸಾಂಕ್ರಾಮಿಕವನ್ನು ಪ್ರಧಾನಿ ಮೋದಿ ಅವರ ಹೆಸರು ಹಾಳುಮಾಡಲು ಬಳಸುತ್ತಿದೆ. ಅಲ್ಲದೆ ಕುಂಭಮೇಳವನ್ನು 'ಸೂಪರ್‌ ಸ್ಪ್ರೆಡರ್‌ ಕುಂಭ' ಎಂದು ಕರೆಯುವಂತೆ ಕಾಂಗ್ರೆಸ್‌ ಸೂಚಿಸಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಈ ದೂರುಗಳನ್ನು ತಳ್ಳಿ ಹಾಕಿರುವ ಎಐಸಿಸಿ ಸಂಶೋಧನಾ ಇಲಾಖೆಯ ಮುಖ್ಯಸ್ಥ ರಾಜೀವ್ ಗೌಡ ಅವರು, 'ಬಿಜೆ‍ಪಿ, ಕೋವಿಡ್‌ ಪರಿಸ್ಥಿತಿಯ ದುರುಪಯೋಗದ ಕುರಿತಾಗಿ ನಕಲಿ ಟೂಲ್‌ಕಿಟ್‌ ಅನ್ನು ಪ್ರಚಾರ ಮಾಡುತ್ತಿದೆ. ಈ ಸಾಂಕ್ರಾಮಿಕದ ಸಮಯದಲ್ಲಿ ಜನರಿಗೆ ಪರಿಹಾರ ಒದಗಿಸುವುದನ್ನು ಬಿಟ್ಟು, ನಾಚಿಕೆಯಿಲ್ಲದೆ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಸಂಬಿತ್ ಪಾತ್ರಾ ವಿರುದ್ಧ ದೂರು ದಾಖಲಿಸುವುದಾಗಿ' ಟ್ವೀಟ್‌ ಮಾಡಿದ್ದಾರೆ.

ಕೋವಿಡ್ ಹೊಸ ತಳಿಗೆ 'ಮೋದಿ ತಳಿ' ಎಂದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗುಡುಗು